AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್ ಬಂಕಲ್ಲಿ ಕೆಲಸ ಮಾಡುತ್ತಿರುವ ಯುವಕನ ಜತೆ ಎಂಜಿನಿಯರಿಂಗ್ ಓದ್ತಿರೋ ಯುವತಿಗೆ ಲವ್, ಮದುವೆ! ಆಮೇಲೇನಾಯ್ತು?

ಆ ಜೋಡಿ ಒಂದೇ ಗ್ರಾಮದವರು, ಒಂದೇ ಸಮುದಾಯದವರು. ಅಷ್ಟೇ ಅಲ್ಲ, ಸಂಬಂಧದಲ್ಲಿ ಯುವತಿಗೆ ಆ ಯುವಕ ಮಾವನೇ ಆಗಬೇಕು. ಆದರೂ, ಪೋಷಕರು ಮಾತ್ರ ಯುವಪ್ರೇಮಿಗಳಿಗೆ ವಿಲನ್ ಆಗಿದ್ದು ನೆಮ್ಮದಿ ಕೆಡಿಸಿದ್ದಾರೆ. ಇದೀಗ ಪೋಷಕರ ವಿರೋಧ ಇದ್ದರೂ ಮದುವೆಯಾಗಿರುವ ಯುವ ಜೋಡಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿ ರಕ್ಷಣೆ ನೀಡುವಂತೆ ಮನವಿ ಮಾಡಿದೆ.

ಪೆಟ್ರೋಲ್ ಬಂಕಲ್ಲಿ ಕೆಲಸ ಮಾಡುತ್ತಿರುವ ಯುವಕನ ಜತೆ ಎಂಜಿನಿಯರಿಂಗ್ ಓದ್ತಿರೋ ಯುವತಿಗೆ ಲವ್, ಮದುವೆ! ಆಮೇಲೇನಾಯ್ತು?
ಮಾರುತಿ ಹಾಗೂ ಅಮೃತಾ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Oct 17, 2025 | 8:56 AM

Share

ಚಿತ್ರದುರ್ಗ, ಅಕ್ಟೋಬರ್ 17: ಎಸ್​ಎಸ್​ಎಲ್​ಸಿ ವರೆಗೆ ಓದಿ ಊರಿನಲ್ಲೇ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿರುವ ಯುವಕನ ಜತೆ ಬೆಂಗಳೂರಿಗೆ ತೆರಳಿ ಎಂಜಿನಿಯರಿಂಗ್ ಓದುತ್ತಿರುವ ಯುವತಿಗೆ ಲವ್! ಪೋಷಕರ ವಿರೋಧದ ಮಧ್ಯೆಯೂ ಮದುವೆ. ಇದೀಗ ಯುವ ಜೋಡಿಗೆ ಪೋಷಕರೇ ವಿಲನ್ ಆಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ವಿದ್ಯಮಾನ ನಡೆದಿದ್ದು ಚಿತ್ರದುರ್ಗದಲ್ಲಿ. ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲ್ಲೂಕಿನ ರಾಮಜೋಗಿಹಳ್ಳಿಯ ಅಮೃತಾ ಪಿಯುಸಿ ಪಾಸಾಗಿದ್ದು ಬೆಂಗಳೂರಲ್ಲಿ ಬಿಇ ಓದುತ್ತಿದ್ದಾಳೆ. ಕಳೆದ ಐದು ವರ್ಷಗಳಿಂದ ಸಂಬಂಧದಲ್ಲಿ ಮಾವನೇ ಆದ ಸ್ವಗ್ರಾಮದ ಮಾರುತಿಯನ್ನು ಪ್ರೇಮಿಸುತ್ತಿದ್ದಾಳೆ. ವಿಷಯ ತಿಳಿದ ಯುವತಿಯ ಪೋಷಕರು ಉಗ್ರ ಸ್ವರೂಪ ತಾಳಿದ್ದಾರೆ. ಯುವತಿಗೆ ಇಲ್ಲದ ಕಿರುಕುಳ ನೀಡಿ ಮಾರುತಿಗೂ ಜೀವ ಬೆದರಿಕೆ ಹಾಕಿದ್ದಾರೆ. ಯುವಕ ಎಸ್​ಎಸ್​ಎಲ್​ಸಿ ಮಾತ್ರ ಓದಿದ್ದು ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ, ಬಡತನದ ಕುಟುಂಬ ಮತ್ತು ಶಿಕ್ಷಣ ಇಲ್ಲದ ಕಾರಣ ಪ್ರೇಮ ವಿವಾಹಕ್ಕೆ ವಿರೋಧಿಸಿದ್ದಾರೆಂದು ಅಮೃತಾ ಆರೋಪಿಸಿದ್ದಾಳೆ.

ಅಮೃತಾಳ ಪೋಷಕರ ಬೆದರಿಕೆ, ವಿವಾಹಕ್ಕೆ ವಿರೋಧದಿಂದ ಕಂಗಾಲಾದ ಮಾರುತಿ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಕೊನೆಗೆ ಅಮೃತಾಳೇ ಬೆಂಗಳೂರಿಂದ ಆಗಮಿಸಿ ಮಾರುತಿಯನ್ನು ಡಿಸ್ಚಾರ್ಜ್ ಮಾಡಿಸಿ ದೇಗುಲದಲ್ಲಿ ಮದುವೆ ಆಗಿದ್ದಾಳೆ. ಪೋಷಕರಿಂದ ಜೀವ ಬೆದರಿಕೆ ಇದ್ದು ರಕ್ಷಣೆ ನೀಡಿ ಬದುಕಲು ಬಿಡಿ ಎಂದು ಯುವ ಜೋಡಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಆಗಮಿಸಿ ಗುರುವಾರ ಮನವಿ ಮಾಡಿದ್ದಾರೆ‌.

ಇದನ್ನೂ ಓದಿ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ, ಕತ್ತು ಕುಯ್ದ ಪುತ್ರ

ಒಟ್ಟಾರೆಯಾಗಿ ರಾಮಜೋಗಿಹಳ್ಳಿಯ ಅಮೃತಾ ಮತ್ತು ಮಾರುತಿ ಪೋಷಕರ ವಿರೋಧ ಲೆಕ್ಕಿಸದೆ ಮದುವೆ ಆಗಿದ್ದಾರೆ. ಅಂತಸ್ತು ಮತ್ತು ಶಿಕ್ಷಣದ ಬಗ್ಗೆ ತಕರಾರು ತೆಗೆದು ಅಮೃತಾ ಪೋಷಕರು ಯುವ ಜೋಡಿಯ ಪಾಲಿಗೆ ವಿಲನ್ ಆಗಿದ್ದಾರೆ. ಐಮಂಗಲ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More