ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ, ಕತ್ತು ಕುಯ್ದ ಪುತ್ರ
ಬಾಗಲಕೋಟೆಯ ತುಳಸಿಗೇರಿಯಲ್ಲಿ ಮದ್ಯ ಸೇವನೆಗೆ ಹಣ ನೀಡದ ತಾಯಿಯನ್ನು ಪುತ್ರನೇ ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ. 28 ವರ್ಷದ ವೆಂಕಟೇಶ್ ತನ್ನ 58 ವರ್ಷದ ತಾಯಿ ಶಾವಕ್ಕ ಗಿರಿಸಾಗರ್ ಕೈಕಾಲು ಕಟ್ಟಿ, ಕತ್ತು ಕುಯ್ದು ಕೊಲೆ ಮಾಡಿದ್ದಲ್ಲದೆ, ಆಮೇಲೆ ಬಾರೊಂದಕ್ಕೆ ತೆರಳಿ ಆರಾಮವಾಗಿ ಕುಡಿಯುತ್ತಾ ಕುಳಿತಿದ್ದ! ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಾಗಲಕೋಟೆ, ಅಕ್ಟೋಬರ್ 17: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ ಹಾಕಿ, ಕತ್ತು ಕುಯ್ದು ಕೊಲೆ ಮಾಡಿದ ದಾರುಣ ಘಟನೆ ಬಾಗಲಕೋಟೆ (Bagalkot) ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ವೆಂಕಟೇಶ್ ಗಿರಿಸಾಗರ್ ಎಂಬಾತ ತನ್ನ 58 ವರ್ಷದ ತಾಯಿ ಶಾವಕ್ಕ ಗಿರಿಸಾಗರ್ ಕೈ ಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ. ಶಾವಕ್ಕ ಗಿರಿಸಾಗರ್ತಾಯಿ ಮನೆಯಲ್ಲಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ.
ಶಾವಕ್ಕ ಗಿರಿಸಾಗರ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇನ್ನು ಮಗಳನ್ನು ಕೂಡ ಮದುವೆ ಮಾಡಿ ಬೇರೆ ಊರಿಗೆ ಕೊಡಲಾಗಿತ್ತು. ಮನೆಯಲ್ಲಿ ಮಗ ವೆಂಕಟೇಶ್ ಹಾಗೂ ಶಾವಕ್ಕ ವಾಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ತುಳಸಿಗೇರಿ ಗ್ರಾಮದಲ್ಲಿ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಮಗ ವೆಂಕಟೇಶ್ ಯಾವುದೇ ಕೆಲಸ ಕಾರ್ಯ ಮಾಡದೆ ಕುಡಿತದ ದಾಸನಾಗಿದ್ದ. ತಾಯಿ ಶಾವಕ್ಕ ಕೂಲಿ ನಾಲೆ ಮಾಡಿ ಮಗನನ್ನು ಸಾಕಿ ಸಲುತ್ತಿದ್ದಳು .ಆದರೆ ವೆಂಕಟೇಶ್ ನಿತ್ಯ ಕುಡಿದು ಬಂದು ತಾಯಿ ಜೊತೆ ಮಗ ಜಗಳವಾಡುತ್ತಿದ್ದ. ಜೊತೆಗೆ ಮದ್ಯಪಾನ ಮಾಡಲು ಹಣ ಕೊಡು ಎಂದು ಪೀಡಿಸುತ್ತಿದ್ದ.
ಗುರುವಾರ ಕೂಡ ಎಂದಿನಂತೆಯೇ ಕುಡಿಯಲು ಹಣ ಕೊಡು ಎಂದು ಪೀಡಿಸಿದ್ದಾನೆ. ತಾಯಿ ನಿರಾಕರಿಸಿದಾಗ, ಬಟ್ಟೆಯಿಂದ ಆಕೆಯ ಕೈ ಕಾಲು ಕಟ್ಟಿ, ಬಾಯಲ್ಲಿ ಬಟ್ಟೆ ತುರುಕಿ ಕತ್ತು ಕೊಯ್ದು ಕೊಲೆ ಮಾಡಿ ಓಡಿಹೋಗಿದ್ದಾನೆ. ಸಂಜೆಯಾದರೂ ಕೂಡ ಶಾವಕ್ಕ ಕಾಣಿಸದೆ ಇದ್ದಾಗ ಅಕ್ಕಪಕ್ಕದವರು ಮನೆ ಬಾಗಿಲು ಸಂಧಿಯಲ್ಲಿ ಇಣುಕಿ ನೋಡಿದ್ದಾರೆ. ಆಗ ರಕ್ತದ ಮಡುವಿನಲ್ಲಿ ಸಾವಕ್ಕ ಶವವಾಗಿ ಬಿದ್ದಿದ್ದಳು. ತಕ್ಷಣ ಸ್ಥಳೀಯರು ಕಲಾದಗಿ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ. ತಾಯಿಯನ್ನು ಕೊಂದಂತಹ ಪಾಪಿ ಮಗ ಗದ್ದನಕೇರಿ ಕ್ರಾಸ್ನ ಒಂದು ಬಾರ್ನಲ್ಲಿ ಕುಡಿಯುತ್ತಾ ಕೂತಿದ್ದ. ಸದ್ಯ ಕಲಾದಗಿ ಪೊಲೀಸರು ದುಷ್ಟ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕತ್ತು ಕೊಯ್ದು ವಿದ್ಯಾರ್ಥಿನಿಯ ಬರ್ಬರ ಹತ್ಯೆ, ಪರೀಕ್ಷೆ ಬರೆದು ಮನೆಗೆ ಹೋಗುತ್ತಿದ್ದವಳು ದುರಂತ ಅಂತ್ಯ
9 ತಿಂಗಳು ಹೊತ್ತು, ಹೆತ್ತು, ಸಾಕಿ ಸಲುಹಿದ ಜನನಿಯ ಜೀವವನ್ನೇ ಮದ್ಯಪಾನಕ್ಕಾಗಿ ಈ ಪಾಪಿ ಕೊನೆಗೊಳಿಸಿದ್ದಾನೆ. ಕ್ರೂರಿ ಮಗನ ವಿಕೃತಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 am, Fri, 17 October 25




