ಮಂಡ್ಯ: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರು; ಮೂವರು ಸಾವು

| Updated By: Rakesh Nayak Manchi

Updated on: Feb 04, 2024 | 10:26 AM

ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ. ಅಲ್ಲದೆ, ಶಾಲಾ ಕಾಂಪೌಂಡ್‌ ಹಾಗೂ ಮನೆಗೆ ಬಸ್​ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಬಾಗೆಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಬಳಿ ಲಾರಿ ಡಿಕ್ಕಿಯಾಗಿ ಬೈಕ್​ ಸವಾರ ದುರ್ಮರಣ ಹೊಂದಿದ ಘಟನೆ ನಡೆದಿದೆ.

ಮಂಡ್ಯ: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರು; ಮೂವರು ಸಾವು
ಮಂಡ್ಯ: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರು; ಮೂವರು ಸಾವು
Follow us on

ಮಂಡ್ಯ, ಫೆ.4: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸೇತುವೆ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೆ.ಆರ್.ಪೇಟೆ ನಿವಾಸಿಗಳಾದ ಅನಿಕೇತನ್ (30), ಪವನ್ ಶೆಟ್ಟಿ (32) ಹಾಗೂ ಚಿರಂಜೀವಿ (32) ಮೃತಪಟ್ಟವರಾಗಿದ್ದು, ಘಟನೆಯಲ್ಲಿ ಸಾಗರ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಕೆ.ಆರ್.ಪೇಟೆಯಿಂದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತ (Accident) ಸಂಭವಿಸಿದ್ದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ಕಾಂಪೌಂಡ್‌, ಮನೆಗೆ ಬಸ್​ ಡಿಕ್ಕಿ: ಓರ್ವ ಸಾವು

ಹಾಸನ: ಶಾಲಾ ಕಾಂಪೌಂಡ್‌ ಹಾಗೂ ಮನೆಗೆ ಬಸ್​ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಬಳಿ ನಡೆದಿದೆ. ಉದಯಪುರ ಗ್ರಾಮದ ಅಮೃತ್‌ರಾಜ್ (34) ಮೃತ ದುರ್ದೈವಿ. ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪ್ರತಿವರ್ಷ ಬಿಎಂಟಿಸಿ ಬಸ್​​ಗಳಿಂದ 30ಕ್ಕೂ ಹೆಚ್ಚು ಮಾರಣಾಂತಿಕ ಅಪಘಾತ: ಚಾಲಕರಿಗೆ ವಿಶೇಷ ತರಬೇತಿ

ಬೆಂಗಳೂರಿಂದ ಧರ್ಮಸ್ಥಳಕ್ಕೆ ಹೊರಟಿದ್ದ KSRTC ಬಸ್ ಬಾಗೆ ಗ್ರಾಮಕ್ಕೆ ತಲುಪುತ್ತಿದ್ದಂತೆ ಬಸ್‌ನ ಆಕ್ಸಲ್ ತುಂಡಾಗಿ ರಸ್ತೆ ಪಕ್ಕದ ಜಮೀನಿಗೆ ನುಗ್ಗಿ ಮನೆಗೆ ಡಿಕ್ಕೆ ಹೊಡೆದು, ಜೆಎಸ್ಎಸ್ ಶಾಲೆಯ ಕಾಂಪೌಂಡ್ ಡಿಕ್ಕಿ ಹೊಡೆದಿದೆ. ಪರಿಣಾಮ ಶಾಲೆಯ ಕಾಂಪೌಂಡ್‌ ಹಾಗೂ ಮನೆಗೆ ಡಿಕ್ಕಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕ ಅಮೃತ್‌ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮೀನಿನಲ್ಲಿದ್ದ ಮನೆಗೂ ಬಸ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಾರಿ ಡಿಕ್ಕಿಯಾಗಿ ಬೈಕ್​ ಸವಾರ ದುರ್ಮರಣ

ಕಲಬುರಗಿ: ಲಾರಿ ಡಿಕ್ಕಿಯಾಗಿ ಬೈಕ್​ ಸವಾರ ದುರ್ಮರಣ ಹೊಂದಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಜಲಕರ್ಟಿ-ಲಡ್ಪಾಪುರ ಮಧ್ಯೆ ನಡೆದಿದೆ. ವಾಡಿ ಪಟ್ಟಣದ ಜಾಂಬವೀರ ಕಾಲೋನಿ ನಿವಾಸಿ ಸೂರ್ಯಕಾಂತ ಮುಂಡರಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಯಾದಗಿರಿದಿಂದ ವಾಡಿಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ