ಮಂಡ್ಯ: ಜಿಲ್ಲೆಯಲ್ಲಿ ಒಂದೇ ದಿನ ಮತ್ತೊಂದು ಕಾರು ಅಪಘಾತ (Accident) ಸಂಭವಿಸಿದೆ. ಚಾಲಕನ (Driver) ನಿಯಂತ್ರಣ ತಪ್ಪಿ 25 ಅಡಿ ಆಳದ ವಿಸಿ ನಾಲೆಗೆ ಕಾರು ಬಿದ್ದಿರುವ ಘಟನೆ ಮಂಡ್ಯ (Mandya) ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬ ಕಾರಿನಲ್ಲಿ ಪಾಂಡವಪುರದ ಕಡೆ ತೆರಳುತ್ತಿತ್ತು. ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದರಿಂದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಬಳಿಯ ವಿಸಿ ನಾಲೆಗೆ ಬಿದ್ದಿದೆ.
ನಾಲೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಿದ್ದರಿಂದ ಕಾರು ಮುಳುಗಿಲ್ಲ. ಅವಘಡ ಕಂಡ ಮಾಚಹಳ್ಳಿ ಗ್ರಾಮಸ್ಥರು ಕೂಡಲೆ ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಕಾರಿನಲ್ಲಿದ್ದ ನಾಲ್ಕು ಜನರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಂದು ಬೆಳಿಗ್ಗೆ (ಜೂ.04) ಬೆಂಗಳೂರು ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ತಿರುಮಲಾಪುರ ಬಳಿ ನಡೆದಿದೆ. ಹೇಮಂತ್, ನವೀನ್, ಶರತ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹಗಳು ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಸ್ಥಳಕ್ಕೆ ಬೆಳ್ಳೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಸಾವು: ಚಾಲಕ ವಶಕ್ಕೆ
ಜಿಲ್ಲೆಯ ಮದ್ದೂರು ತಾಲೂಕಿನ ಚಳ್ಳನಕೆರೆ ಗೇಟ್ ಬಳಿ ನಿಂತಿದ್ದ ಕ್ಯಾಂಟರ್ಗೆ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಬೆಳಗ್ಗಿನ ಜಾವ ನಿದ್ದೆಯ ಮಂಪರಿನಲ್ಲಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅಪಘಾತದ ರಭಸಕ್ಕೆ ವಾಹನ ನಜ್ಜುಗುಜ್ಜು ಆಗಿದೆ. ಸ್ಥಳಕ್ಕೆ ಮದ್ದೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತ ವ್ಯಕ್ತಿ ಯಾರು ಎಂಬುದು ತಿಳಿದಿಲ್ಲ.
ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Sun, 4 June 23