
ಮಂಡ್ಯ, ಸೆಪ್ಟೆಂಬರ್ 26: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯದ ಬೋಟಿಂಗ್ ಪಾಯಿಂಟ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರ ಕನಸಿನ ಕಾರ್ಯಕ್ರಮ ‘ಕಾವೇರಿ ಆರತಿ’ಗೆ ಇಂದು ಚಾಲನೆ ಸಿಗಲಿದೆ. ವಾರಾಣಸಿಯ ಗಂಗಾ ಆರತಿಯ ಮಾದರಿಯಲ್ಲೇ 5 ದಿನಗಳ ಕಾಲ ಸಾಂಕೇತಿಕವಾಗಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಡಿಸಿಎಂ ಡಿಕೆಶಿ ಕಾವೇರಿ ಆರತಿಗೆ ಚಾಲನೆ ನೀಡಲಿದ್ದು, ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ತರಬೇತಿ ಪಡೆದಿರುವ ಸ್ಥಳೀಯ ಪುರೋಹಿತರಿಂದಲೇ ಕಾರ್ಯಕ್ರಮ ನಡೆಯಲಿದ್ದು, ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿ ಇರಲಿದೆ. 12-13 ಜನರನ್ನೊಳಗೊಂಡ ವೈದಿಕರ ತಂಡ ಕಾರ್ಯಕ್ರಮದ ನೇತೃತ್ವ ವಹಿಸಲಿದೆ. ಇನ್ನು ರಾಜ್ಯ, ಹೊರರಾಜ್ಯ ಸೇರಿದಂತೆ ಕಾರ್ಯಕ್ರಮಕ್ಕೆ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ. ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಜೊತೆಗೆ ಕಾರ್ಯಕ್ರಮದ ಐದೂ ದಿನಗಳ ಕಾಲ ಟೋಲ್ ಸಂಗ್ರಹದಲ್ಲೂ ಪ್ರವಾಸಿಗರಿಗೆ ವಿನಾಯಿತಿ ಇರಲಿದೆ.
Cauvery is not just a river – she is our mother, our lifeline, our pride.
Today, a long-cherished dream comes alive as we begin the Cauvery Aarti – a sacred tribute to the river that has nourished our land and people for generations.
6 PM
Brindavan Gardens, KRS Dam, Mandya… pic.twitter.com/y2MLMOZ14b— DK Shivakumar (@DKShivakumar) September 26, 2025
ಕಾವೇರಿ ಆರತಿ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಉಚಿತವಾಗಿ ಲಾಡು ವಿತರಿಸಲು ತೀರ್ಮಾನಿಸಲಾಗಿದೆ. ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ನಿರ್ಧಾರದಂತೆ ಪ್ರತಿನಿತ್ಯ ಲಾಡು ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾವೇರಿ ಆರತಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪ್ರಸಾದ ರೂಪದಲ್ಲಿ ಈ ಲಾಡುಗಳನ್ನ ವಿತರಿಸಲಾಗುತ್ತೆ.
ಕಾವೇರಿ ಆರತಿ ಕಾರ್ಯಕ್ರಮದ ಅಂಗವಾಗಿ ಕೆಆರ್‌ಎಸ್ ಬೃಂದಾವನವನ್ನು ವಿದ್ಯುದ್ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ KRS ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಗಂಗಾ ಆರತಿ ಮಾದರಿಯಲ್ಲಿ ಕೆಆರ್ಎಸ್ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಸಿನ ಕಾರ್ಯಕ್ರಮ ಆಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಈ ವಿಚಾರವನ್ನು ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದರು. ಕುಂಭ ಮೇಳಕ್ಕೆ ಭೇಟಿ ನೀಡಿ ಬಂದ ನಂತರ ಆ ಬಗ್ಗೆ ಅಧಿಕೃತ ಘೋಷಣೆಯನ್ನೂ ಮಾಡಿದ್ದರು. ಆ ಬಳಿಕ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲನೆಯನ್ನೂ ನಡೆಸಲಾಗಿತ್ತು. ಇದೀಗ ಅಂತಿಮವಾಗಿ ಕಾರ್ಯಕ್ರಮ ಸಾಕಾರಗೊಳ್ಳುತ್ತಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:35 am, Fri, 26 September 25