ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ; ಮಂಡ್ಯದಲ್ಲಿ ಇಂದು ಬಿಜೆಪಿ ನಾಯಕರ ಸಭೆ

| Updated By: ವಿವೇಕ ಬಿರಾದಾರ

Updated on: Aug 19, 2023 | 7:48 AM

ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಸಂಬಂಧ ಇಂದು (ಆ.19) ಬೆಳಗ್ಗೆ 10.30 ಕ್ಕೆ ಮಂಡ್ಯದಲ್ಲಿ ವಿಪಕ್ಷ ಬಿಜೆಪಿ ಸಭೆ ನಡೆಸಲಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ; ಮಂಡ್ಯದಲ್ಲಿ ಇಂದು ಬಿಜೆಪಿ ನಾಯಕರ ಸಭೆ
ಬಿಜೆಪಿ ಚಿಹ್ನೆ (ಎಡಚಿತ್ರ) ಕಾವೇರಿ ನೀರು (ಬಲಚಿತ್ರಿ)
Follow us on

ಮಂಡ್ಯ (ಆ.19): ರಾಜ್ಯದಲ್ಲಿ ಕಾವೇರಿ (Cauvery) ವಿವಾದ ಮತ್ತೆ ಭುಗಿಲೆದ್ದಿದೆ. ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳ ಮೇಲ್ಬಾಗದ ಜಲಾಯನ ಪ್ರದೇಶಗಳಲ್ಲಿ ವಾಡಿಕೆಯಷ್ಟು ಮುಂಗಾರು (Mansoon) ಮಳೆಯಾಗದೆ (Rain) ಡ್ಯಾಂಗಳೇ ಭರ್ತಿ ಆಗಿಲ್ಲ. ಆದರೂ ಕೂಡ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ (Congress)​ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಸಂಬಂಧ ಇಂದು (ಆ.19) ಬೆಳಗ್ಗೆ 10.30 ಕ್ಕೆ ಮಂಡ್ಯದಲ್ಲಿ ವಿಪಕ್ಷ ಬಿಜೆಪಿ ಸಭೆ ನಡೆಸಲಿದೆ.

ರಾಜ್ಯ ಸರ್ಕಾರದ ವಿರುದ್ಧ ಕಾವೇರಿ ಅಸ್ತ್ರ ಪ್ರಯೋಗಿಸಲು ಬಿಜೆಪಿ ಸಭೆ ಸೇರುತ್ತಿದೆ. ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ ಮತ್ತು ಮೈಸೂರು ಐದು ಜಿಲ್ಲೆಗಳ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು ಮಂಡ್ಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಕಾವೇರಿ ವಿಚಾರದಲ್ಲಿ ಮುಂದಿನ ಹೋರಾಟ ರೂಪಿಸುವ ವಿಚಾರವಾಗಿ ಸಭೆ ನಡೆಯಲಿದೆ.

ಇದನ್ನೂ ಓದಿ: ನೀರಿನ ಅಭಾವದ ಮಧ್ಯೆ ತಮಿಳುನಾಡಿಗೆ ನೀರು: ಕಾವೇರಿ ನಿರ್ವಹಣಾ ಪ್ರಾಧಿಕಾರ ಮೊರೆ ಹೋಗಲು ಸರ್ಕಾರ ತೀರ್ಮಾನ

ವಿಧಾನಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಬಿಜೆಪಿ ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಪಾಲ್ಗೊಳ್ಳುತ್ತಿದ್ದಾರೆ. ಸುಮಲತಾ ಅಂಬರೀಶ ಚುನಾವಣೆ ಬಳಿಕ ಬಿಜೆಪಿಯಿಂದ ಒಂದಷ್ಟು ಅಂತರ ಕಾಯ್ದುಕೊಂಡಿದ್ದರು.

ರಾಜ್ಯ ಸರ್ಕಾರ ಕೃಷ್ಣರಾಜ ಸಾಗರ ಡ್ಯಾಂನಿಂದ 12,781 ಕ್ಯೂಸೆಕ್ಸ್ ನೀರನ್ಮು ಕಾವೇರಿ ನದಿಗೆ ಬಿಡುಗಡೆ ಮಾಡಿ ಅದನ್ನು ತಮಿಳುನಾಡಿಗೆ ಹರಿಸಿತ್ತು. ಕೆಆರ್​ಎಸ್ ಜಲಾಶಯಯದ ಗರಿಷ್ಟ ಮಟ್ಟ 124.80 ಅಡಿ, ಇವತ್ತು ಅದರಲ್ಲಿ 108 ಅಡಿಗಳಷ್ಟು ಮಾತ್ರ ನೀರಿದೆ. ಪುನಃ ಮಳೆಯಾಗದಿದ್ದರೆ ರಾಜ್ಯದ ಜನತೆ ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ.

ಇನ್ನು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ 15 ದಿನಗಳ ಹಿಂದೆಯಷ್ಟೆ ಭರ್ತಿಯಾಗಿತ್ತು. ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿಗಳು  ಬಾಗಿನ ಅರ್ಪಿಸುತ್ತಿದ್ದರು. 84 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 78.50 ಅಡಿಯಷ್ಟು ನೀರಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ 5.5 ಅಡಿಯಷ್ಟು ನೀರು ಖಾಲಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Sat, 19 August 23