ಕರ್ನಾಟಕದಲ್ಲಿ ಕ್ಷೀರ ಕ್ರಾಂತಿ ಆಗುತ್ತಿದೆ; ಮಂಡ್ಯ ಗೆಜ್ಜಲಗೆರೆಯಲ್ಲಿ ಬಸವರಾಜ ಬೊಮ್ಮಾಯಿ

| Updated By: Ganapathi Sharma

Updated on: Dec 30, 2022 | 1:38 PM

ಕರ್ನಾಟಕದಲ್ಲಿ ಹಾಲು ಉತ್ಪಾದನೆ ಮೂಲಕ ಸಮಗ್ರ ಅಭಿವೃದ್ಧಿಯಾಗಲಿದೆ. ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕದಲ್ಲಿ ಕ್ಷೀರ ಕ್ರಾಂತಿ ಆಗುತ್ತಿದೆ; ಮಂಡ್ಯ ಗೆಜ್ಜಲಗೆರೆಯಲ್ಲಿ ಬಸವರಾಜ ಬೊಮ್ಮಾಯಿ
ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುತ್ತಿರುವುದು
Follow us on

ಮಂಡ್ಯ: ಕರ್ನಾಟಕದಲ್ಲಿ ಕ್ಷೀರ ಕ್ರಾಂತಿ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿ (Mega Dairy) ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ (Karnataka) ಹಾಲು ಉತ್ಪಾದನೆ ಮೂಲಕ ಸಮಗ್ರ ಅಭಿವೃದ್ಧಿಯಾಗಲಿದೆ. ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಎಂದು ಅವರು ಹೇಳಿದರು. ದೇಶದಲ್ಲಿ ಸಹಕಾರ ಸಂಘಕ್ಕೆ ಶಕ್ತಿ ತುಂಬುವ ಕೆಲಸ ಆಗಲಿದೆ. ಪ್ರಥಮ ಮದರ್ ಡೇರಿ ಸ್ಥಾಪನೆಗೆ ಮಾಜಿ ಪ್ರಧಾನಿ ಎಚ್.​ಡಿ. ದೇವೇಗೌಡ ಕಾರಣ. ಆತ್ಮನಿರ್ಭರ್ ಭಾರತಕ್ಕೆ ಕರ್ನಾಟಕ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮೂಲ ಸೌಕರ್ಯ ಅವಶ್ಯಕತೆ ಇದೆ. ಕೈಗಾರಿಕೆ ಮತ್ತು ನೀರಾವರಿ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಅಮಿತ್ ಶಾರನ್ನು ಹೊಗಳಿದ ನಿರ್ಮಲಾನಂದನಾಥ ಶ್ರೀ

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ್ದಲ್ಲದೆ, ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಹೋಲಿಸಿದರು. ಮಂಡ್ಯವನ್ನು ಅರ್ಥ ಮಾಡಿಕೊಂಡರೆ ಇಂಡಿಯಾವನ್ನು ಅರ್ಥ ಮಾಡಿಕೊಳ್ಳಬಹುದು. ದೇಶದ ಶಕ್ತಿ ರೈತರು. ದೇಶದಲ್ಲಿ ಹೆಚ್ಚಿನ ಜನರು ರೈತಾಪಿ ವರ್ಗದವರಿದ್ದಾರೆ. ಜಿಡಿಪಿಗೆ ಶೇಕಡಾ 20ರಷ್ಟು ರೈತ ಸಮುದಾಯದಿಂದ ಸಿಗುತ್ತಿದೆ. ಸರ್ಕಾರ ರೈತರಿಗಾಗಿ ಅನುಕೂಲವಾಗುವ ಯೋಜನೆ ಮಾಡಿದೆ. ಮಂಡ್ಯ ಜಿಲ್ಲೆ ಎಲ್ಲಾ ಜಿಲ್ಲೆಗಳಿಗಿಂತ ಹೆಚ್ಚಿನ ಹಾಲು ಉತ್ಪಾದನೆ ಮಾಡುತ್ತಿದೆ. ಮೆಗಾಡೇರಿ ರೈತರ ಬಾಳಿಗೆ ಬೆಳಕಾಗುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಅಮಿತ್ ಶಾ ವ್ಯಕ್ತಿತ್ವ ಬಹಳ ದೊಡ್ಡದು; ದೇವೇಗೌಡ

ಮೆಗಾ ಡೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಸಹಕಾರ ಕ್ಷೇತ್ರದ ಸದಸ್ಯರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅಮಿತ್ ಶಾ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ. ಒಟ್ಟು 260 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಡೇರಿ ನಿರ್ಮಾಣವಾಗಿದೆ. ನಿತ್ಯ 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಲಿದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್​ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Fri, 30 December 22