ಮಂಡ್ಯ, ಜುಲೈ 14: ಈ ಬಾರಿ ರಾಜ್ಯದಲ್ಲಿ ನಿರೀಕ್ಷೆ ಮಟ್ಟದಲ್ಲಿ ಮುಂಗಾರು(Monsoon) ಮಳೆಯಾಗುತ್ತಿಲ್ಲ. ರಾಜ್ಯದ ಬಹುತೇಕ ಡ್ಯಾಂಗಳು(Karnataka Dams) ಖಾಲಿ ಖಾಲಿಯಾಗಿಯೇ ಇವೆ. ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂನಲ್ಲಿ(KRS Dam) ಇಂದಿಗೆ 89 ಅಡಿ ನೀರು ಸಂಗ್ರಹ ಇದೆ. ಡ್ಯಾಂ ಗೆ 1711 ಕ್ಯೂಸೆಕ್ ನೀರು ಒಳ ಹರಿವಿದ್ರೆ, ಕೇವಲ 349 ಕ್ಯೂಸೆಕ್ ನೀರು ಹೊರ ಹರಿವಿದೆ. ಕೆಆರ್ಎಸ್ ಡ್ರಾಂನಲ್ಲಿ ನೀರು ಕಡಿಮೆಯಾಗಿರೋದು ಜಿಲ್ಲೆಯ ರೈತರ ಬದುಕಿನ ಮೇಲಷ್ಟೆ ಪರಿಣಾಮ ಬೀರಿಲ್ಲ. ಜೊತೆಗೆ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.
ಕಾವೇರಿ ನದಿಯಲ್ಲಿ ನೀರಿನ ಕೊರತೆ ಕಂಡು ಬಂದಿದ್ದು ನದಿ ಈಗ ತಳಮಟ್ಟ ಸೇರಿದೆ. ಇದು ಇಲ್ಲಿ ನಡೆವ ಅಸ್ತಿವಿಸರ್ಜನೆ, ಪಿಂಡ ಪ್ರಧಾನಗಳಂತಹ ಧಾರ್ಮಿಕ ಕಾರ್ಯಗಳ ಮೇಲೂ ಪರಿಣಾಮ ಬೀರಿದೆ. ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿದ್ದ ಪಶ್ಚಿಮ ವಾಹಿನಿಯಲ್ಲಿ ಇಂದು ಜನರೇ ಇಲ್ಲದಂತಾಗಿದೆ. ಇದ್ದರೂ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪಿಂಡ ಪ್ರಧಾನ ಮಾಡೋದು ಅಸ್ತಿ ವಿಸರ್ಜನೆ ಮಾಡೋದನ್ನ ಮಾಡ್ತಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ಹೆಸರುವಾಸಿಯಾದ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಜನರ ಸಂಖ್ಯೆ ಕುಸಿದಿದೆ. ಧಾರ್ಮಿಕ ಕಾರ್ಯಗಳಿಗೆ ಬರುವ ಜನರು ಸ್ನಾನ ಮಾಡಲು ನದಿಯಲ್ಲಿ ನೀರಿನ ಕೊರತೆ ಎದುರಾಗಿದೆ. ಇರುವ ಕಡಿಮೆ ನೀರಿನಲ್ಲೇ ತಮ್ಮವರ ಹೆಸರಿನಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನ ನೆರವೇರಿಸಿ ತಲೆ ಮೇಲೆ ಚಂಬಿನಿಂದ ನೀರು ಹಾಕೊಳ್ತಿದ್ದಾರೆ.
ಇದನ್ನೂ ಓದಿ: Karnataka Dam Water Level: ಜು.19ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ
ಇನ್ನೂ ಕೆಲವರು ಪಿಂಡ ಪ್ರಧಾನ ನೆರವೇರಿಸಿ ನದಿಯಲ್ಲಿ ಮುಳುಗಲಾಗದೆ ಹಾಗೇ ತೆರಳುತ್ತಿದ್ದಾರೆ. ಪಶ್ಚಿಮವಾಹಿನಿಯಲ್ಲಿ ಅಸ್ತಿ ವಿಸರ್ಜನೆ ಮಾಡಿದ್ರೆ, ಪಿಂಡ ಪ್ರಧಾನ ಮಾಡಿದ್ರೆ ಮನುಷ್ಯನಿಗೆ ಮುಕ್ತಿ ಸಿಗುತ್ತೆ ಅನ್ನೋದು ನಂಬಿಕೆ. ಹೀಗಾಗಿಯೇ ಇಲ್ಲಿ ರಾಜ್ಯದ ಜನರಷ್ಟೇ ಅಲ್ಲದೇ ಹೊರ ರಾಜ್ಯದ ಜನರೂ ಬಂದು ತೀರಿ ಹೋಗಿರೊ ತಮ್ಮ ಮನೆಯ ಸದಸ್ಯರ ಹೆಸರಿನಲ್ಲಿ ಧಾರ್ಮಿಕ ಕಾರ್ಯ ನಡೆಸಿ ಹೋಗ್ತಾರೆ. ಮಹಾತ್ಮಗಾಂಧಿ, ಇಂದಿರಾಗಾಂಧಿ ಸೇರಿದಂತೆ ದೇಶದ ಅನೇಕ ಗಣ್ಯರ ಅಸ್ತಿವಿಸರ್ಜನೆ ಮಾಡಿರೋ ಸ್ಥಳ ಇದಾಗಿದೆ.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ