ಮಂಡ್ಯ: ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ (Mysugar factory) ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಆ.17 ಅಥವಾ 18ಕ್ಕೆ ಅಧಿಕೃತವಾಗಿ ಕಾರ್ಖಾನೆ ಪುನರಾರಂಭ ಸಾಧ್ಯತೆ ಎನ್ನಲಾಗುತ್ತಿದ್ದು, ಸಿಎಂ ಅವರಿಂದಲೇ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆಗೆ ಚಿಂತನೆ ನಡೆಸಲಾಗುತ್ತಿದೆ. 4 ವರ್ಷಗಳ ಬಳಿಕ ಕಾರ್ಖಾನೆಯಲ್ಲಿ ಯಂತ್ರಗಳ ಸದ್ದು ಮಾಡಲು ಸಿದ್ಧವಾಗಿವೆ. ಕಬ್ಬು ನುರಿಸುವ ಕಾರ್ಯಕ್ಕೆ ಮೈಶುಗರ್ ಕಾರ್ಖಾನೆ ಸಜ್ಜಾಗಿದ್ದು, ಇಂದು ಕಾರ್ಖಾನೆಯಲ್ಲಿ ಪೂಜೆ, ಹೋಮ-ಹವನ ನಡೆಯಲಿದೆ. ಜೊತೆಗೆ ಇಂದೇ ಬಾಯ್ಲರ್ಗೆ ಅಗ್ನಿ ಸ್ಪರ್ಶ ನಡೆಯಲಿದೆ. ಯಂತ್ರೋಪಕರಣಗಳು ಕೆಟ್ಟು ಹೋಗಿದ್ದ ಹಿನ್ನೆಲೆ 4 ವರ್ಷಗಳಿಂದ ಮೈಶುಗರ್ ಕಾರ್ಖಾನೆ ಮುಚ್ಚಿತ್ತು. ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಸಾಕಷ್ಟು ಹೋರಾಟಗಳು ನಡೆದಿದ್ದು, ಹೋರಾಟಕ್ಕೆ ಮಣಿದು ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಭರವಸೆ ನೀಡಿತ್ತು. ಸರ್ಕಾರದ ಭರವಸೆಯಂತೆ ಪುನರಾರಂಭಕ್ಕೆ ಮೈಶುಗರ್ ಸಜ್ಜಾಗಿದ್ದು, ಮಂಡ್ಯ ಜನರಲ್ಲಿ ಸಂತಸ ಮನೆ ಮಾಡಿದೆ.
ಇಂದು ಆಗುತ್ತಿರುವ ಖುಷಿ ನನಗೆ ಯಾವತ್ತೂ ಆಗಿಲ್ಲ: ಸಂಸದೆ ಸುಮಲತಾ ಅಂಬರೀಶ್
ಮೈಶುಗರ್ ಕಾರ್ಖಾನೆಯಲ್ಲಿನ ಪೂಜೆ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ನಾನು ಸಂಸದೆಯಾಗಿ 3 ವರ್ಷಗಳು ಕಳೆದಿವೆ. ಇಂದು ಆಗುತ್ತಿರುವ ಸಂತೋಷ ಯಾವತ್ತೂ ಆಗಿಲ್ಲ. ನನ್ನ ಚುನಾವಣೆಯ ವೇಳೆಯಲ್ಲಿ ಮಂಡ್ಯದ ರೈತರಿಗೆ ಮೈಶುಗರ್ ಚಾಲನೆ ಮಾಡೇ ಮಾಡಿಸುತ್ತೇನೆಂದು ವಾಗ್ದಾನ ಕೊಟ್ಟಿದ್ದೆ. ನನಗೆ ಸರ್ಕಾರದಿಂದ ಸಾಕಷ್ಟು ಸಹಕಾರ ಸಿಕ್ಕಿದೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಗೋಪಾಲಯ್ಯ ಅವರ ಸಹಕಾರ ಸಿಕ್ಕಿದೆ. ಒಬ್ಬರ ಹೋರಾಟದ ಫಲದಿಂದ ಇದು ಆಗಿಲ್ಲ. ಸಾಕಷ್ಟು ಜನರ ಫಲದಿಂದ ಪ್ರಾರಂಭವಾಗುತ್ತಿದೆ. ಅಂಬರೀಶ್ ಅವರ ಕನಸು ಇದಾಗಿತ್ತು.
ಎಷ್ಟೋ ವರ್ಷಗಳ ಹೋರಾಟದ ಫಲವಿದು. ಮಂಡ್ಯ ಜಿಲ್ಲೆಯ ರೈತರಿಗೆ ಐತಿಹಾಸಿಕ ಹಾಗೂ ಸಂಭ್ರಮದ ದಿನ ಇದು. ಕೊರೋನಾ, ಪ್ರವಾಹದ ನಂತರ ಸಂಭ್ರಮಿಸಲು ಇದು ಅವಕಾಶ. ಮೈಶುಗರ್ ಆರಂಭಕ್ಕೆ ಸಹಕಾರ ಕೊಟ್ಟಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಹೇಳಿದರು.
ಬಾಯ್ಲರ್ಗೆ ಅಗ್ನಿ ಸ್ಪರ್ಶ ಮಾಡಿದ ಮಂತ್ರಿ ಮಹೋದಯರು
ಐತಿಹಾಸಿಕ ಘಟನೆಗೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಿದ್ದು, ಮೈ ಶುಗರ್ ಕಾರ್ಖಾನೆಯ ಬಾಯ್ಲರ್ಗೆ ಉಸ್ತುವಾರಿ ಸಚಿವ ಗೋಪಾಲಯ್ಯ, ಕ್ರೀಡಾ ಸಚಿವ ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಪ್ರಿಂದ ಅಗ್ನಿ ಸ್ಪರ್ಶ ಮಾಡಲಾಯಿತು. ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಮಂಡ್ಯದ ಮೈ ಶುಗರ್ ಕಾರ್ಖಾನೆ ನಾಲ್ಕು ವರ್ಷಗಳಿಂದ ಬಂದ್ ಆಗಿತ್ತು. ಇಂದು ಬಾಯ್ಲರ್ ಗೆ ಮಂತ್ರಿ ಮಹೋದಯರು ಅಗ್ನಿ ಸ್ಪರ್ಶ ಮಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:32 pm, Thu, 11 August 22