ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಹೋಗುವವರಿಗೆ ಕೆಎಸ್​ಆರ್​ಟಿಸಿ ವಿಶೇಷ ಬಸ್ ವ್ಯವಸ್ಥೆ: ಇಲ್ಲಿದೆ ವಿವರ

| Updated By: Ganapathi Sharma

Updated on: Dec 19, 2024 | 8:57 AM

ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಆರಂಭವಾಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ಹಾಗೂ ಮೈಸೂರಿನಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಬಸ್​ಗಳ ವಿವರ ಹಾಗೂ ಸಮ್ಮೇಳನದ ಕಾರ್ಯಕ್ರಮಗಳು, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಸತಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಹೋಗುವವರಿಗೆ ಕೆಎಸ್​ಆರ್​ಟಿಸಿ ವಿಶೇಷ ಬಸ್ ವ್ಯವಸ್ಥೆ: ಇಲ್ಲಿದೆ ವಿವರ
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಹೋಗುವವರಿಗೆ ಕೆಎಸ್​ಆರ್​ಟಿಸಿ ವಿಶೇಷ ಬಸ್ ವ್ಯವಸ್ಥೆ
Follow us on

ಬೆಂಗಳೂರು, ಡಿಸೆಂಬರ್ 19: ಮಂಡ್ಯದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುವವರಿಗೆ ಕೆಎಸ್​ಆರ್​ಟಿಸಿ ಶುಭ ಸುದ್ದಿ ನೀಡಿದೆ. ಮೈಸೂರು, ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಡಿಸೆಂಬರ್ 20 ರಂದು ಬೆಳಿಗ್ಗೆ 6 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಸಮ್ಮೇಳನಾರ್ಧಯಕ್ಷ ಗೊರು ಚನ್ನಬಸಪ್ಪರನ್ನು ಮೆರವಣಿಗೆ, ಪೂರ್ಣ ಕುಂಭ ಸ್ವಾಗತದ ಮೂಲಕ ಕರೆತರಲಾಗುತ್ತದೆ.

ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಸ್ಪೀಕರ್, ಕವಿಗಳು ಭಾಗವಹಿಸಲಿದ್ದಾರೆ. ಅಮೇರಿಕಾದ ಅಕ್ಕ ಸಮ್ಮೇಳನ ಅಯೋಜಕ ಅಮರನಾಥ್ ಈ ಬಾರಿ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ.

ಪ್ರಪಂಚದಾದ್ಯಂತ ಕನ್ನಡಿಗರು ನಮ್ಮ ಸಮ್ಮೇಳನಕ್ಕೆ ಬರಬೇಕು ಎಂಬ ಆಸೆ ಇದೆ‌. ಆದ್ದರಿಂದ ವಿದೇಶದಲ್ಲಿರುವ ಕನ್ನಡಿಗರಿಗೆ ಆಹ್ವಾನ ಕೂಡ ಕೊಡಲಾಗಿದೆ. ದಸರಾ ರೀತಿ ಮಂಡ್ಯದಲ್ಲಿ ದೀಪಾಲಂಕಾರ ಮಾಡುತ್ತಿದ್ದೇವೆ. ಪೊಲೀಸ್ ಬ್ಯಾಂಡ್ ಅನ್ನು ಸಮ್ಮೇಳನದಲ್ಲಿ ಬಳಸಿಕೊಳ್ಳಲಾಗಿದೆ‌. ಕನ್ನಡ ಗೀತೆಯನ್ನೇ ಪೊಲೀಸ್ ಬ್ಯಾಂಡ್​ನಲ್ಲಿ ನುಡಿಸಲಾಗುತ್ತದೆ. ಮೂರು ದಿನವೂ ನುಡಿ ಜಾತ್ರೆಯ ಸ್ವರ ಯಾತ್ರೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಸಾಧುಕೋಕಿಲಾ, ಅರ್ಜುನ್ ಜನ್ಯ ಸೇರಿ ಸ್ಥಳೀಯ ಕಲಾವಿದರು ಸಾಂಸಕ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.

350 ವಾಣಿಜ್ಯ ಮಳಿಗೆ, 450 ಪುಸ್ತಕ ಮಳಿಗೆ

ಸಮ್ಮೇಳನದ ಸಿದ್ಧತೆ ಬಗ್ಗೆ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದು, 350 ವಾಣಿಜ್ಯ ಮಳಿಗೆ, 450 ಪುಸ್ತಕ ಮಳಿಗೆ ತೆರೆಯಲಾಗಿದೆ ಎಂದಿದ್ದಾರೆ. ಎಲ್ಲರೂ ಭಾಗವಹಿಸುವ ಕಾರ್ಯಕ್ರಮ ಅಂದರೆ, ಸಾಹಿತ್ಯ ಸಮ್ಮೇಳನ. ಜಾತಿ, ಧರ್ಮ ಹಾಗೂ ವಯೋಮಿತಿ ಇಲ್ಲದೆ ಭಾಗವಹಿಸಬಹುದು. ಮ್ಯಾರಥಾನ್​ಗೆ ಅಂದುಕೊಂಡಿದ್ದಕ್ಕಿಂತ ದೊಡ್ಡ ಯಶಸ್ಸು ಸಿಕ್ಕಿದೆ. ಸಮ್ಮೇಳನಕ್ಕೆ ಬರುವವರಿಗೆ 140 ಕೌಂಟರ್​ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕಾರ್ಯಕ್ಕೆ 250 ಜನರನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಚಿತ ಬಸ್ ವ್ಯವಸ್ಥೆ

ಮಂಡ್ಯ ಜಿಲ್ಲೆಯ ಪ್ರತಿ ತಾಲೂಕಿನಿಂದ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗಾಗಿ ತಲಾ 15 ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಡಿ 20, 21ರಂದು ಮಂಡ್ಯ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ

ಏತನ್ಮಧ್ಯೆ, ಡಿಸೆಂಬರ್ 20ರ ಬೆಳಿಗ್ಗೆ 5 ಗಂಟೆಯಿಂದ 23ರ ಬೆಳಿಗ್ಗೆ 6 ಗಂಟೆವರೆಗೆ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರು ಮತ್ತು ಮಂಡ್ಯಕ್ಕೆ ಬಂದು ಹೋಗುವವರಿಗಾಗಿ ಮಾರ್ಗ ಬದಲಾವಣೆ ಮಾಡಿ ಮಂಡ್ಯ ಡಿಸಿ ಡಾ.ಕುಮಾರ ಅವರಿಂದ ಆದೇಶ ಹೊರಿಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 am, Thu, 19 December 24