ಮಂಡ್ಯ, ನವೆಂಬರ್ 20: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Akhil Bharath Sahity Sammelana) ದಿನ ಎಣಿಕೆ ಆರಂಭವಾಗಿದೆ. ಡಿಸೆಂಬರ್ 20, 21 ಮತ್ತು 22 ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೆಳನ ನಡೆಯಲಿದೆ. ಶುಭ ಕಾರ್ಯಕ್ಕೆ ನೂರೆಂಟು ವಿಘ್ನ ಎಂಬಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುನ್ನವೇ ಸಾಲು ಸಾಲು ವಿವಾದ ಸೃಷ್ಟಿಯಾಗಿದೆ. ಹೌದು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ನಡೆಗೆ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವರ ಅಧ್ಯಕ್ಷತೆಯ ಸಭೆಯಲ್ಲೇ ಸಾಹಿತಿಗಳು ಗದ್ದಲ ಎಬ್ಬಿಸಿದ್ದಾರೆ. ಸಾಹಿತ್ಯ ಪರಿಷತ್ ಹಾಗೂ ಸಾಹಿತಿಗಳ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.
ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲೂ ಸಾಹಿತಿಗಳ ನಡುವೆ ಹೈಡ್ರಾಮಾ ಸೃಷ್ಟಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಮೊದಲು ಮಾತನಾಡಲು ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಹಾಗೂ ಹಿರಿಯ ಸಾಹಿತಿ ಪ್ರೊ.ಮುದ್ದೇಗೌಡ ನಡುವೆ ಜಟಾಪಟಿ ಏರ್ಪಟ್ಟಿದೆ.
ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಮಂಡ್ಯ: ಭರ್ಜರಿ ತಯಾರಿ
ಇನ್ನು, ತಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಗ್ರಾಮ ಪಂಚಾಯತಿ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧ ಸಮಿತಿಗಳಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ಆಯ್ಕೆ ಮಾಡಿಕೊಳ್ಳದಿದ್ದದಕ್ಕೆ ಬೇಸರ ಹೊರಹಾಕಿದ್ದಾರೆ. ಸಾಹಿತ್ಯ ಸಮ್ಮೇಳನ ನಡೆಯುವುದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ. ಜಾಗದ ಕಸ ವಿಲೇವಾರಿ ಮಾಡುವುದು ಗ್ರಾಮ ಪಂಚಾಯಿತಿ ವತಿಯಿಂದ. ಹೀಗಿದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಮ್ಮೇಳನದಲ್ಲಿ ಮನ್ನಣೆ ನೀಡಿಲ್ಲ.
ಸಮ್ಮೇಳನದಲ್ಲಿ ಟಿಪ್ಪು ವಿಚಾರಗೋಷ್ಠಿ ಆಯೋಜನೆಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹಾಗೇ, ಕನ್ನಡ ಶಾಲೆಗೆ ಅನುದಾನ ಬಿಡುಗಡೆ ಮಾಡದಿದ್ದಕ್ಕೆ ಅನುದಾನರಹಿತ ಶಾಲೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:48 pm, Wed, 20 November 24