
ಮಂಡ್ಯ, ನವೆಂಬರ್ 20: ನಗರದ ಮಹಾವೀರ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಏಕಾಏಕಿ ಬಸ್ ಮುಂದೆ ನಿಂತು ಘೋಷಣೆ ಕೂಗಿದ್ದ ಯುವಕನ ವರ್ತನೆಯಿಂದ ಕೆಲಕಾಲ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ನವೆಂಬರ್ 20ರಂದು ನಡೆದಿತ್ತು.
ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಘೋಷಣೆ ಕೂಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಈತ ಮಂಡ್ಯದ ಶಂಕರಮಠ ನಿವಾಸಿ ಅಬ್ಬುಲ್ ಸತ್ತಾರ್ ಎಂಬುದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ಮುಂದೆ ಬೈಕ್ ನಿಲ್ಲಿಸಿ ಸಾರ್ವಜನಿಕ ಸ್ಥಳದಲ್ಲಿ ಘೋಷಣೆ ಕೂಗಿ ಕಿರಿಕಿರಿ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಬ್ಬುಲ್ ಸತ್ತಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) 166, 270, 285 ಹಾಗೂ 100(7)(ಬಿ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಮಂಡ್ಯ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಕಾಮುಕನ ಹಾವಳಿ ಹೆಚ್ಚಾಗಿದ್ದು, ರೋಗಿಗಳ ಸಂಬಂಧಿಕರಾಗಿ ಬರುವ ಮಹಿಳೆಯರಿಗೆ ನಿರಂತರ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಆಸ್ಪತ್ರೆಯ ವಾರ್ಡ್‌ಗೆ ಪ್ರವೇಶಿಸುವ ವ್ಯಕ್ತಿಯೊಬ್ಬ, ರೋಗಿಯ ಪಕ್ಕದಲ್ಲಿ ಮಲಗಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ.
ನಿದ್ರೆಯಲ್ಲಿದ್ದ ಮಹಿಳೆಯೊಬ್ಬರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದು, ತಕ್ಷಣ ಎಚ್ಚೆತ್ತ ಮಹಿಳೆ ವ್ಯಕ್ತಿ ಕಪಾಳಕ್ಕೆ ಬಾರಿಸಿದ್ದಾರೆ. ಮಹಿಳೆ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದಲ್ಲಿದ್ದವರು ಎಚ್ಚರಗೊಳ್ಳುತ್ತಿದ್ದಂತೆ ಆರೋಪಿ ವಾರ್ಡ್‌ನಿಂದ ಪರಾರಿಯಾಗಿದ್ದಾನೆ. ಮತ್ತೊಂದೆಡೆ, ಕಳೆದ ಒಂದು ವಾರದಲ್ಲಿ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳು ಕಳ್ಳತನವಾಗಿರುವ ಆರೋಪವೂ ಕೇಳಿಬಂದಿದೆ. ಆರೋಪಿಯ ಕಿರುಕುಳದ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆರೋಪಿಯನ್ನು ಕೂಡಲೇ ಪತ್ತೆಹಚ್ಚಿ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.