ಸರ್ಕಾರಿ ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್;ಸಮಯಪಾಲನೆ ಕಡ್ಡಾಯ ಮಾಡಿದ ಮಂಡ್ಯ ಜಿಲ್ಲಾಧಿಕಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 01, 2023 | 9:18 PM

ಸಕ್ಕರೆ ನಗರಿ ಮಂಡ್ಯದಲ್ಲಿ ಬಹಳಷ್ಟು ಜನ ರೈತರು, ಜನಸಾಮಾನ್ಯರದ್ದು ಒಂದೇ ದೂರು. ಯಾವುದೇ ಸರ್ಕಾರಿ ಕಚೇರಿಗೆ ಹೋದರು ಅಧಿಕಾರಿಗಳು ಕೈಗೆ ಸಿಗುವುದಿಲ್ಲ.ಕೆಲಸಗಳನ್ನು ಮಾಡಿಕೊಡಲು ಕಳ್ಳಾಟ ಆಡುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸಿಗದೇ ಸಾರ್ವಜನಿಕರು ಕೂಡ ರೋಸಿ ಹೋಗಿದ್ದರು. ಈ ನಿಟ್ಟಿನಲ್ಲಿ ಇದಕ್ಕೆಲ್ಲ ಬ್ರೇಕ್ ಹಾಕುವ ಉದ್ದೇಶದಿಂದ ಮಂಡ್ಯ ಜಿಲ್ಲಾಧಿಕಾರಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಸರ್ಕಾರಿ ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್;ಸಮಯಪಾಲನೆ ಕಡ್ಡಾಯ ಮಾಡಿದ ಮಂಡ್ಯ ಜಿಲ್ಲಾಧಿಕಾರಿ
ಮಂಡ್ಯ ಜಿಲ್ಲಾಧಿಕಾರಿ
Follow us on

ಮಂಡ್ಯ, ನ.01: ಸಕ್ಕರೆ ನಗರಿ ಮಂಡ್ಯ(Mandya) ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮಂಡ್ಯ ಜಿಲ್ಲಾಧಿಕಾರಿ(District Collector) ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ದ ಒಂದು ಗಂಭೀರ ಆರೋಪ ಕೇಳಿಬರುತ್ತಿತ್ತು. ಜಿಲ್ಲೆ ಹಾಗೂ ತಾಲೂಕಿನ ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದರು, ಅಧಿಕಾರಿಗಳು ಕಚೇರಿಯಲ್ಲಿ ಇರುತ್ತಿರಲಿಲ್ಲ. ಜೊತೆಗೆ ಕೆಲಸ ಕಾರ್ಯಗಳು ಕೂಡ ಆಗುತ್ತಿರಲಿಲ್ಲ. ಕೆಲಸ ಮಾಡಿಸಿಕೊಳ್ಳಲು ಬಹಳ ಸಮಯ ಕಾಯಬೇಕು ಎಂಬ ದೂರುಗಳು ಬರುತ್ತಿದ್ದವು. ಈ ವಿಚಾರವನ್ನು ಮನಗಂಡಿರುವ ಡಿಸಿ ಡಾ.ಕುಮಾರ್ ಅವರು ಖಡಕ್ ಆದೇಶವೊಂದನ್ನ ಹೊರಡಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್

ಹೌದು, ಸರ್ಕಾರಿ ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಸಮಯಪಾಲನೆ ಕಡ್ಡಾಯ ಮಾಡಿ ಅಧಿಕಾರಿಗಳಿಗೆ ಮೂಗುದಾರ ಹಾಕಿದ್ದಾರೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯ ಮಾಡಿದ್ದು, ಕಚೇರಿ ಸಮಯದಲ್ಲಿ ಟೀ/ಕಾಫಿ ಕುಡಿಯಲು ಹೋಗುವಂತಿಲ್ಲ. ಇಷ್ಟ ಬಂದ ಹಾಗೇ ಬಂದು ಹೋಗುವುದು ಮಾಡುವಂತೆ ಇಲ್ಲ. ಕಚೇರಿಯ ನಿಗದಿತ ಅವಧಿಯಲ್ಲಿ ಸಮಯ ಪ್ರಜ್ಞೆ ಪಾಲನೆ ಮಾಡಬೇಕು. ಪ್ರತಿ ಕಚೇರಿಯಲ್ಲಿಯೂ ಸಿಬ್ಬಂದಿ ವರ್ಗದ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದು, ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ಇಲಾಖೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು. ಅನಧಿಕೃತವಾಗಿ ಸರ್ಕಾರಿ ವಾಹನ ಬಳಕೆಗೆ ನಿರ್ಬಂಧಿಸಲಾಗಿದೆ. ಜೊತೆಗೆ ಉಲ್ಲಂಘನೆ ಮಾಡಿದವರ ವಿರುದ್ಧ
ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡಿದ್ದಾರೆ.

ಇದನ್ನೂ ಓದಿ:ಕಾವೇರಿ ವಿವಾದ: ಸಿದ್ದರಾಮಯ್ಯ ಅಭಯಕ್ಕೂ ಮಣಿಯದ ಮಂಡ್ಯದ ರೈತರು, ಮತ್ತೆ 14 ದಿನ ಪ್ರತಿಭಟನೆ

ಅಂದಹಾಗೆ ಮಂಡ್ಯ ಜಿಲ್ಲೆಯಲ್ಲಿ ಕೆಲಸ ಮಾಡುವ ಬಹುತೇಕ ಸರ್ಕಾರಿ ಅಧಿಕಾರಿಗಳು ಮೈಸೂರಿನಲ್ಲಿ ವಾಸವಾಗಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೇ ಮನೆ ಮಾಡಿ, ವಾಸ ಇರಬೇಕು ಎಂಬ ಸರ್ಕಾರಿ ನಿಯಮ ಇದ್ದರು ಸಹ ಬಹುತೇಕರು ಮೈಸೂರಿನಲ್ಲಿ ವಾಸ ಮಾಡಿ, ಅಲ್ಲಿಂದಲೇ ತಿರುಗಾಡುತ್ತಿದ್ದಾರೆ. ಅಲ್ಲದೆ ನಿಗದಿತ ಸಮಯಕ್ಕಿಂತ ಕಚೇರಿಗೆ ತಡವಾಗಿ
ಆಗಮಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಜನ ಸಾಮಾನ್ಯರು ಸಾಕಷ್ಟು ಬಾರಿ ದೂರು ನೀಡಿದ್ದರು. ಈ ವಿಚಾರವನ್ನ ಎಚ್ಚೆತ್ತುಕೊಂಡು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಇದು ಜನ ಸಾಮಾನ್ಯರಲ್ಲೂ ಕೊಂಚಮಟ್ಟಿಗೆ ಮಂದಹಾಸಕ್ಕೆ ಕಾರಣವಾಗಿದ್ದು, ಕಟ್ಟುನಿಟ್ಟಾಗಿ ಪಾಲನೆ ಆಗಬೇಕು ಎಂದು ಒತ್ತಾಯ
ಮಾಡಿದ್ದಾರೆ.

ಒಟ್ಟಾರೆ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿಗಳು ಮುಂದಾಗಿದ್ದು, ಇದು ಪಾಲನೆ ಆಗುತ್ತದೆಯಾ? ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲನೆ ಮಾಡುತ್ತಾರಾ? ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ