ಮಂಡ್ಯ ಜುಲೈ 29: ಜಿಲ್ಲೆಯ ತುರಗನೂರು ನಾಲೆಗೆ ಬಿದ್ದು ನಾಲ್ವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಸಿ.ಮಹದೇವಪ್ಪ (HC Mahadevappa) ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N. Chaluvaraya Swamy) ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ವೈಯಕ್ತಿಕ ನೆರವು ನೀಡಿದ್ದಾರೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಜತೆ ಮಾತಾಡಿ ಹೆಚ್ಚಿನ ಪರಿಹಾರ ನೀಡಲಾಗುವುದು. ಅಪಘಾತ ವಲಯಗಳನ್ನು ಗುರುತಿಸಿ ತಡೆಗಟ್ಟಲು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಸರ್ವೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಶನಿವಾರ ರಾತ್ರಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ನಾಲೆಗೆ ಕಾರು ಪಲ್ಟಿಯಾಗಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದರು. ಕಾರಿನಲ್ಲಿ ತೆರಳುತ್ತಿದ್ದ ಐವರ ಪೈಕಿ ನಾಲ್ವರು ಮೃತ ಪಟ್ಟಿದ್ದು, ಚಾಲಕ ಪಾರಾಗಿದ್ದಾನೆ. ಗಾಮನಹಳ್ಳಿ ನಿವಾಸಿ ದೋಣಯ್ಯ ಎಂಬುವವರ ಪತ್ನಿ ಮಹದೇವಮ್ಮ, ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿ ನಿವಾಸಿಗಳಾಗಿರುವ ಸಂಜನಾ, ಮಾದೇವಿ, ರೇಖಾ ಮೃತ ದುರ್ದೈವಿಗಳು.
ಗೊರವನಹಳ್ಳಿ ನಿವಾಸಿ ಚಾಲಕ ಮನೋಜ್ ಈಜಿ ದಡ ಸೇರಿದ್ದರೆರು. ಗಾಮನಹಳ್ಳಿಯಿಂದ ದೊಡ್ಡಮುಲಗೂಡು ಗ್ರಾಮಕ್ಕೆ ತೆರಳುತ್ತಿದ್ದರು. ನಾಲೆ ಏರಿಯ ತಿರುವಿನಲ್ಲಿ ಕಬ್ಬಿಣದ ತಾತ್ಕಾಲಿಕ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಬಳಿಕ ನಾಲೆಗೆ ಪಲ್ಟಿಯಾಗಿತ್ತು. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Sun, 30 July 23