ಮಂಡ್ಯ, ಡಿಸೆಂಬರ್ 14: ಮಂಡ್ಯದಲ್ಲಿ ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿರುವ ಕೆಲವು ಗೋಷ್ಠಿಗಳು ಸಾಹಿತ್ಯಾಸಕ್ತರ ಹಾಗೂ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿವೆ. ವಿಭಿನ್ನ ವಸ್ತು, ವಿಷಯಗಳನ್ನೂ ಸಾಹಿತ್ಯ ಗೋಷ್ಠಿಗಳಿಗೆ ಆಯ್ಕೆ ಮಾಡಲಾಗಿದೆ. ಇವುಗಳನ್ನು ಮುಖ್ಯವಾದವು ಕರ್ನಾಟಕ-ಪ್ರಕೃತಿ ವಿಕೋಪದ ಆತಂಕಗಳು ಮತ್ತು ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ ಕುರಿತ ಗೋಷ್ಠಿ. ಈ ವಿಷಯಗಳ ಮೇಲೆ ಯಾವ ರೀತಿಯ ಚರ್ಚೆ ನಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಾಹಿತ್ಯ ಸಮ್ಮೇಳನದ ಅಧಿಕೃತ ಆಹ್ವಾನಪತ್ರಿಕೆ ಬಹಿರಂಗವಾಗಿದ್ದು, ಗೋಷ್ಠಿಗಳ ವಿವರಗಳು ಲಭ್ಯವಾಗಿವೆ. ಯುವಜನತೆ ಮತ್ತು ಸಬಲೀಕರಣ, ಹೊಸ ತಲೆಮಾರಿನ ಸಾಹಿತ್ಯ, ಬೆಳಗಾವಿಯ ಐತಿಹಾಸಿಕ ಅಧಿವೇಶನದ ಕುರಿತು ಸಹ ವಿಚಾರ ಗೋಷ್ಠಿ ಆಯೋಜಿಸಲಾಗಿದೆ.
ಗೋಷ್ಠಿಗಳ ವಿಚಾರದಲ್ಲಿ ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಕ ಸಾಹಿತ್ಯ ಪರಿಷತ್ ಹೊಸ ಹೆಜ್ಜೆಯನ್ನಿಟ್ಟಿದೆ. ಇದೇ ಪ್ರಥಮಬಾರಿಗೆ ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ ಕುರಿತು ಚರ್ಚೆ ನಡೆಯಲಿದೆ. ಇನ್ನು ಸಮಾನಾಂತರ ವೇದಿಕೆಗಳಲ್ಲೂ ಈ ವಸ್ತುವೈವಿಧ್ಯತೆ ಕಾಯ್ದುಕೊಳ್ಳಲಾಗಿದ್ದು, ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು, ಸೃಜನಶೀಲತೆ-ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು, ಕರ್ನಾಟಕ-ಪ್ರಕೃತಿ ವಿಕೋಪದ ಆತಂಕಗಳು, ಶತಮಾನೋತ್ಸವ ವರ್ಷದ ಕನ್ನಡ ಲೇಖಕರು, ದಲಿತ ಸಾಹಿತ್ಯದ ನೆಲೆಗಳು, ಪುನಶ್ವೇತನವಾಗಬೇಕಿರುವ ಸಾಹಿತ್ಯ ಪ್ರಕಾರಗಳು, ಕನ್ನಡ ಭಾಷಾ ಸಾಮಗ್ರ ಅಭಿವೃದ್ಧಿ ಅಧಿನಿಯಮ-2022: ಪರಿಣಾಮಕಾರಿ ಅನುಷ್ಠಾನ, ರಂಗಭೂಮಿ, ಚಲನಚಿತ್ರ ಕಿರುತೆರೆ ಕ್ಷೇತ್ರದ ಸವಾಲುಗಳು, ಕೃಷಿ ಮತ್ತು ಕೃಷಿಕರ ಸಂಕಷ್ಟ ಸವಾಲುಗಳು ಮತ್ತು ಪರಿಹಾರಗಳು, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ, ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು ವಿಷಯಗಳ ಮೇಲೆ ಗೋಷ್ಠಿಗಳು ನಡೆಯಲಿವೆ.
ಸದ್ಯದ ಪರಿಸ್ಥಿತಿಯಲ್ಲಿ ‘ಕರ್ನಾಟಕ-ಪ್ರಕೃತಿ ವಿಕೋಪದ ಆತಂಕಗಳು’ ವಿಚಾರದಲ್ಲಿ ಗೋಷ್ಠಿ ಆಯೋಜಿಸಿರುವುದು ರಾಜ್ಯದ ಮಟ್ಟಿಗೆ ಬಹಳ ಮಹತ್ವದ್ದಾಗಿದೆ. ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತದಂಥ ಅನೇಕ ಪ್ರಕೃತಿ ವಿಕೋಪಗಳ ಸವಾಲನ್ನು ಕರ್ನಾಟಕ ಸದ್ಯ ಎದುರಿಸುತ್ತಿದೆ. ಏತನ್ಮಧ್ಯೆ, ಕೆಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಜಿಲ್ಲೆಯ ಅನೇಕ ಪ್ರದೇಶಗಳ ಭೌಗೋಳಿಕ ಚಿತ್ರಣವನ್ನೇ ಬದಲಾಯಿಸಿತ್ತು. ಈ ರೀತಿಯ ದುರಂತಗಳು ಹೇಗೆ ಅಲ್ಲಿನ ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ? ಸಾಹಿತ್ಯದ ಮೇಲೆ ಇಂಥ ಘಟನೆಗಳ ಪ್ರಭಾವವೇನು ಎಂಬುದನ್ನು ಮಥಿಸುವ ನಿಟ್ಟಿನಲ್ಲಿ ಈ ರೀತಿಯ ಗೋಷ್ಠಿಗಳು ಮಹತ್ವದ್ದಾಗಿವೆ.
ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಬರೋಬ್ಬರಿ 26 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನಾಲ್ಕು ಕವಿಗೋಷ್ಠಿಗಳಲ್ಲಿ ಕವನಗಳ ವಾಚನ ನಡೆಯಲಿದೆ. ಮೂರು ದಿನಗಳಲ್ಲಿ ಪ್ರಧಾನ ವೇದಿಕೆಯಲ್ಲಿ ಒಂಭತ್ತು ಗೋಷ್ಠಿಗಳು ಹಾಗೂ ಎರಡು ಕವಿಗೋಷ್ಠಿಗಳು ನಡೆಯಲಿದ್ದರೆ, ಎರಡು ಸಮಾನಾಂತರ ವೇದಿಕೆಯಲ್ಲಿ ತಲಾ 9 ಗೋಷ್ಠಿಗಳ ಜತೆಗೆ ಒಂದೊಂದು ಕವಿಗೋಷ್ಠಿಗಳು ಜರುಗಲಿವೆ.
ಇದನ್ನೂ ಓದಿ: ಎಸ್‌ಎಂ ಕೃಷ್ಣ ಬರೆದ ಕೊನೆಯ ಪತ್ರ ಲಭ್ಯ: ಮಂಡ್ಯ ಸಾಹಿತ್ಯ ಸಮ್ಮೇಳನದ ಬಗ್ಗೆ ಏನು ಬರೆದಿದ್ದರು ನೋಡಿ
ಉದ್ಘಾಟನಾ ಸಮಾರಂಭದಲ್ಲಿ ಮಂಡ್ಯ ಜಿಲ್ಲೆಯ ಸುಮಾರು 87 ಕಲಾವಿದರು ನಾಡಗೀತೆ, ರೈತಗೀತೆ ಹಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 45 ಮಂದಿಗೆ ಮೊದಲ ದಿನ, ಎರಡನೇ ದಿನ 46 ಹಾಗೂ ಕೊನೆಯ ದಿನ 47 ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ