ಜಲ್ಲಿ ಕ್ರಷರ್ ಮಾಲೀಕನಿಗೆ ಬ್ಲಾಕ್ ಮೇಲ್, ಕಿರಿಕ್: ಗ್ರಾಮ ಪಂಚಾಯಿತಿ ಸದಸ್ಯನಿಗೆ ಬಿತ್ತು ಮಚ್ಚಿನೇಟು

| Updated By: ಸಾಧು ಶ್ರೀನಾಥ್​

Updated on: Jan 18, 2023 | 4:21 PM

ಮೂಲದ ಪ್ರಕಾರ ಸಕ್ರಮವಾಗಿ ನಡೆಯುತ್ತಿರುವ ಕ್ರಷರನ್ನ ಅಕ್ರಮ ಎಂದು ಮಲ್ಲೇಶ್ ಪದೇ ಪದೇ ಬಿಂಬಿಸುತ್ತಿದ್ದ. ಸಾಲದ್ದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪದೇ ಪದೇ ಜಲ್ಲಿ ಕ್ರಷರ್ ಮಾಲೀಕ ವಿದ್ಯಾಸಾಗರ್ ವಿರುದ್ದ ದೂರನ್ನ ಸಹ ನೀಡಿದ್ದ. ಇದೇ ವಿಚಾರಕ್ಕೆ ಮಲ್ಲೇಶ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಜಲ್ಲಿ ಕ್ರಷರ್ ಮಾಲೀಕನಿಗೆ ಬ್ಲಾಕ್ ಮೇಲ್, ಕಿರಿಕ್: ಗ್ರಾಮ ಪಂಚಾಯಿತಿ ಸದಸ್ಯನಿಗೆ ಬಿತ್ತು ಮಚ್ಚಿನೇಟು
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಗ್ರಾಮ ಪಂಚಾಯಿತಿ ಸದಸ್ಯನಿಗೆ ಮಚ್ಚಿನಿಂದ ಕೊಚ್ಚಿದಾದರೂ ಯಾರು.. ಕ್ರಷರ್ ಮಾಲೀಕನ ಜೊತೆ ಗ್ರಾಮ ಪಂಚಾಯಿತಿ ಸದಸ್ಯನಿಗೂ ಕಿರಿಕ್ ನಡೆದಿದ್ದಾದ್ರೂ ಏಕೆ? ಹಲ್ಲೆಗೊಳಗಾದ ಗ್ರಾಮ ಪಂಚಾಯಿತಿ (Gram Panchayat) ಸದಸ್ಯನ ಸ್ಥಿತಿ ಹೇಗಿದೆ ಎಂಬುದರ ರಿಪೋರ್ಟ್ ನಿಮ್ಮ ಮುಂದೆ. ತಲೆ ತುಂಬಾ ಬ್ಯಾಂಡೇಜ್..ಸ್ಟ್ರೆಚ್ಚರ್ ಮೇಲೆ ವ್ಯಕ್ತಿಯನ್ನ ಕರೆದು ಕೊಂಡು ಹೋಗುತ್ತಿರುವ ಆಸ್ಪತ್ರೆ ಸಿಬ್ಬಂದಿ.. ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವ ವ್ಯಕ್ತಿ.. ಹೀಗೆ ರಕ್ತದ ಮಡುವಿನಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಒದ್ದಾಡುತ್ತಿರುವ ಈ ವ್ಯಕ್ತಿಯ ಹೆಸರು ಮಲ್ಲೇಶ್ ಅಂತ. ಈತ ಗ್ರಾಮ ಪಂಚಾಯಿತಿ ಸದಸ್ಯ. ಈತನ ಈ ಸ್ಥಿತಿಗೆ ಕಾರಣ ಜಲ್ಲಿ ಕ್ರಷರ್ (stone crusher) ವಿಚಾರಕ್ಕೆ ನಡೆದ ಕಿರಿಕ್.

ಹೌದು, ವಿದ್ಯಾ ಸಾಗರ್ ಎಂಬಾತ ಕೋಡಿಶೆಟ್ಟಿಪುರದಲ್ಲಿ (Kodishettypura, Mandya) ಜಲ್ಲಿ ಕ್ರಷರ್ ವೊಂದನ್ನ ನಡೆಸುತ್ತಿದ್ದ. ಹಲ್ಲೆಗೊಳಗಾದ ಮಲ್ಲೇಶ್ ಸಹ ಈ ಕ್ರಷರ್ ಗೆ ಒಂದಿಷ್ಟು ಹಣ ನೀಡಿ ಪಾಲುದಾರಿಕೆಯನ್ನ ಹೊಂದಿದ್ದ. ಆದ್ರೆ ಅದೇನಾಯ್ತೊ ಏನೋ ಮಲ್ಲೇಶ್ ಕ್ರಷರ್ ಪಾಲುದಾರಿಕೆಯಿಂದ ಆಚೆ ಬಂದಿದ್ದ. ಆಗಿಂದಾಗ್ಲೆ ಇಬ್ಬರ ನಡುವೆ ಕಿತ್ತಾಟಗಳು ಆಗ್ತಾನೆ ಇತ್ತು. ನಿನ್ನೆ ಸಹ ಮಲ್ಲೇಶ್, ವಿದ್ಯಾಸಾಗರ್ ಸಂಬಂಧಿ ಸಂಜೀವ್ ಕುಮಾರ್ ಜೊತೆ ಕಿರಿಕ್ ತೆಗೆದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಕಿರಿಕ್ ಆಗಿತ್ತು. ಜಗಳ ವಿಕೋಪಕ್ಕೆ ಹೋಗಿ ಮಲ್ಲೇಶ್ ಮೇಲೆ ಸಂಜೀವ್ ಕುಮಾರ್ ಮಚ್ಚು ಬೀಸಿದ್ದ. ಪರಿಣಾಮ ಗಾಯಾಳು ಮಲ್ಲೇಶ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ಸಕ್ರಮವಾಗಿ ನಡೆಯುತ್ತಿರುವ ಕ್ರಷರನ್ನ ಅಕ್ರಮ ಎಂದು ಮಲ್ಲೇಶ್ ಪದೇ ಪದೇ ಬಿಂಬಿಸುತ್ತಿದ್ದ. ಸಾಲದ್ದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪದೇ ಪದೇ ಜಲ್ಲಿ ಕ್ರಷರ್ ಮಾಲೀಕ ವಿದ್ಯಾಸಾಗರ್ ವಿರುದ್ದ ದೂರನ್ನ ಸಹ ನೀಡಿದ್ದ. ಕ್ರಷರ್ ನಲ್ಲಿ ಉತ್ಪಾದನೆಯಾಗುವ ಎಂ ಸ್ಯಾಂಡನ್ ಅನ್ನು ಮಲ್ಲೇಶ್ ಹೊತ್ತೊಯ್ಯುತ್ತಿದ್ದ. ಹಣ ನೀಡಿ ಎಂದು ಕೇಳಿದ್ರೆ ಹಣ ನೀಡದೆ ಹೋಗ್ತಾಯಿದ್ದ. ಈ ವಿಚಾರಕ್ಕೆ ಮಲ್ಲೇಶ್ ಹಾಗೂ ವಿದ್ಯಾಸಾಗರ್ ನಡುವೆ ಪದೇ ಪದೇ ಕಿರಿಕ್ ಆಗ್ತಾಯಿತ್ತು. ನಿನ್ನೆಯೂ ಇದೇ ವಿಚಾರಕ್ಕೆ ಮಲ್ಲೇಶ್ ಮೇಲೆ ಹಲ್ಲೆ ನಡೆಸಲಾಗಿದೆ.

ಸದ್ಯ ಗಾಯಾಳು ಮಲ್ಲೇಶ್ ರನ್ನ ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ಅಡಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ

Published On - 4:20 pm, Wed, 18 January 23