ಮಂಡ್ಯ, ಆಗಸ್ಟ್ 25: ಆಸ್ತಿ ವಿಚಾರಕ್ಕೆ ಮಲತಾಯಿ ಹಾಗೂ ಮಗಳು ಬೀದಿ ರಂಪಮಾಡಿಕೊಂಡಿದ್ದಾರೆ. ಜಮೀನಿನಲ್ಲೇ ಪರಸ್ಪರ ಜಗಳ ಮಾಡಿಕೊಂಡಿದ್ದು, ಮಗಳ ಮೇಲೆ ಕುಳಿತು ಮಲತಾಯಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಡ್ಯ (Mandya) ಜಿಲ್ಲೆಯ ಮದ್ದೂರು (Madduru) ತಾಲ್ಲೂಕಿನ ಡಿ.ಮಲ್ಲಿಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.
ಡಿ.ಮಲ್ಲಿಗೆರೆ ಗ್ರಾಮದ ಪುಟ್ಟಸ್ವಾಮಿ ಎಂಬುವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಸುಕನ್ಯಾಗೆ ಇಬ್ಬರು ಮಕ್ಕಳಿದ್ದು, ಆಕೆ ಹಲವು ವರ್ಷಗಳ ಹಿಂದೆಯೇ ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ಪುಟ್ಟಸ್ವಾಮಿ ಭಾಗ್ಯರನ್ನು ವಿವಾಹವಾಗಿದ್ದಾರೆ. 5 ತಿಂಗಳ ಹಿಂದಷ್ಟೇ ಪುಟ್ಟಸ್ವಾಮಿ ಕೂಡ ಮೃತಪಟ್ಟಿದ್ದಾರೆ. ನಂತರ, ಮೊದಲ ಹೆಂಡತಿಯ ಮಕ್ಕಳು ಹಾಗೂ ಎರಡನೇ ಹೆಂಡತಿಯ ನಡುವೆ ಜಮೀನು ಹಂಚಿಕೆ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ರವಿವಾರ ಮತ್ತೆ ಜಗಳವಾಗಿದ್ದು, ಈ ವೇಳೆ ಮಗಳ ಮೇಲೆ ಮಲತಾಯಿ ಹಲ್ಲೆ ಮಾಡುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರಾಮದ ಮುಖಂಡರು ನ್ಯಾಯ ಪಂಚಾಯಿತಿ ನಡೆಸಿ ಮೊದಲ ಹೆಂಡತಿ ಮಕ್ಕಳಿಗೆ ನಾಲ್ಕೂವರೆ ಎಕರೆ ಹಾಗೂ ಎರಡನೇ ಹೆಂಡತಿ ಭಾಗ್ಯಾಗೆ 2 ಎಕರೆ ಜಮೀನು ನೀಡಿದ್ದಾರೆ. ಆದರೆ, ಇದಕ್ಕೆ ಮೊದಲ ಹೆಂಡತಿ ಸುಕನ್ಯಾರ ಮಕ್ಕಳಾದ ರೋಜಾ ಹಾಗೂ ರಾಕೇಶ್ ವಿರೋಧಿಸಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಪೊಲೀಸರ ಸಮ್ಮುಖದಲ್ಲಿ ಮತ್ತೆ ನ್ಯಾಯ ಪಂಚಾಯಿತಿ ನಡೆಸಿ ಭಾಗ್ಯಳಿಗೆ 3 ಎಕರೆ ಜಮೀನು ಹಂಚಿಕೆ ಮಾಡಲಾಗಿತ್ತು. ಅದಾದ ಬಳಿಕ ಭಾಗ್ಯ ತನ್ನ ಪಾಲಿಗೆ ಬಂದ ಜಮೀನನ್ನು ಸಂಬಂಧಿಕರೊಬ್ಬರಿಗೆ ಗುತ್ತಿಗೆ ನೀಡಿದ್ದರಂತೆ. ಅದರಲ್ಲಿ, ಸ್ಪಲ್ಪ ಭಾಗಕ್ಕೆ ಕಬ್ಬು ನಾಟಿ ಮಾಡಿ ಹಾಗೂ ಉಳಿದಿದ್ದಕ್ಕೆ ಭತ್ತ ನಾಟಿಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ: ಟಾರ್ಗೆಟ್ ಮಾಡಿದ್ದವನ ಬಿಟ್ಟು ಮತ್ತೊಬ್ಬನ ಹತ್ಯೆ: ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದ ವೈಟ್ ಶರ್ಟ್
ಈ ವಿಚಾರ ತಿಳಿದ ರೋಜಾ ತನ್ನ ಗಂಡ ಸೂರಿ, ಅತ್ತೆ ಹಾಗೂ ಅಜ್ಜಿ ಜೊತೆಗೆ ಜಮೀನು ಬಳಿ ಬಂದು, ಕಬ್ಬಿನ ಸಸಿ ಕಿತ್ತು ಹಾಕಿದ್ದರಂತೆ. ಇದನ್ನು ಪ್ರಶ್ನೆ ಮಾಡಿದಕ್ಕೆ, ಜಗಳವಾಡಿ ನನಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಭಾಗ್ಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಆಸ್ತಿ ವಿಚಾರಕ್ಕೆ ಶುರುವಾದ ಕಲಹ ಬೀದಿಗೆ ಬಂದಿದ್ದು, ಮಗಳು ಹಾಗೂ ಮಲತಾಯಿ ಪರಸ್ಪರ ಕಿತ್ತಾಡಿಕೊಂಡಿದ್ದು, ಪೊಲೀಸರು ಇಬ್ಬರಿಂದಲೂ ದೂರು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ.