AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾರ್ಗೆಟ್ ಮಾಡಿದ್ದವನ ಬಿಟ್ಟು ಮತ್ತೊಬ್ಬನ ಹತ್ಯೆ: ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದ ವೈಟ್‌ ಶರ್ಟ್‌

ಆತ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಊರಿಗೆ ತೆರಳಿದ್ದ. ಆದ್ರೆ, ಊರಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಹಬ್ಬದ ದಿನ ಆತ ಹಾಕಿದ್ದ ಬಿಳಿ ಬಣ್ಣದ ಶರ್ಟ್ ಅವನ ಸಾವಿಗೆ ಕಾರಣವಾಗಿದೆ. ಹೌದು.. ಟಾರ್ಗೆಟ್‌ ಮಾಡಿದ್ದವನನ್ನು ಬಿಟ್ಟು ಮತ್ತೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿದ್ದು ವೈಟ್‌ ಶರ್ಟ್‌. ಈ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ.

ಟಾರ್ಗೆಟ್ ಮಾಡಿದ್ದವನ ಬಿಟ್ಟು ಮತ್ತೊಬ್ಬನ ಹತ್ಯೆ: ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದ ವೈಟ್‌ ಶರ್ಟ್‌
Arun And Vikram
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ|

Updated on: Aug 09, 2025 | 4:04 PM

Share

ಮಂಡ್ಯ, (ಆಗಸ್ಟ್ 09): ಟಾರ್ಗೆಟ್ ಮಾಡಿದ್ದವನನ್ನ ಬಿಟ್ಟು ಮತ್ತೊಬ್ಬನನ್ನ ಹತ್ಯೆಗೈದಿರುವ (Murder) ಘಟನೆ ಮಂಡ್ಯದಲ್ಲಿ (Mandya) ನಡೆದಿದೆ. ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ವೈಟ್ ಶರ್ಟ್ ಸುಳಿವು ಹಿಡಿದು ಫಾಲೋ ಮಾಡಿದ್ದ ಹಂತಕರು ಟಾರ್ಗೆಟ್ ಮಾಡಿದ್ದವನ ಬದಲಿಗೆ ಮತ್ತೊಬ್ಬನನ್ನ ಕೊಚ್ಚಿ ಕೊಲೆ ಮಾಡಿದ್ದಾರೆ. ವಡ್ಡರಹಳ್ಳಿ ಗ್ರಾಮದ ಅರುಣ್ (34) ಕೊಲೆಯಾದ ಯುವಕ. ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ನಿನ್ನೆ (ಆಗಸ್ಟ್ 08) ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಊರಿಗೆ ಬಂದಿದ್ದ. ಈ ವೇಳೆ ಟಾರ್ಗೆಟ್ ಮಾಡಿದ್ದವನನ್ನ ಬಿಟ್ಟು ಅರುಣ್ ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ನಡೆದಿದ್ದು ಹೀಗೆ?

ನಿನ್ನೆ (ಆಗಸ್ಟ್ 08) ರಾತ್ರಿ ಹತ್ಯೆಯಾದ ಅರುಣ್ ತನ್ನ ಸ್ನೇಹಿತ ಸೂರ್ಯ, ಸಹೋದರ ಉಮೇಶ್ ಮತ್ತು ಸಂಬಂಧಿ ದೇವರಾಜ್ ಜೊತೆ ಪಾರ್ಟಿ ಮಾಡುತ್ತಿದ್ದ. ಇದೇ ವೇಳೆ ಬಾರ್‌ ಮುಂಭಾಗದಲ್ಲಿ ಸಿಕ್ಕ ವಿಕ್ರಮ್ ಎಂಬಾತನ ಜೊತೆ ಸೂರ್ಯ ಹಳೇ ದ್ವೇಷದ ವಿಚಾರಕ್ಕೆ ಜಗಳ ತೆಗೆದಿದ್ದಾನೆ. ಎರಡು ವರ್ಷದ ಹಿಂದಿನ ಜಗಳದ ವಿಚಾರವನ್ನು ಮುಂದಿಟ್ಟುಕೊಂಡು ಸೂರ್ಯ, ವಿಕ್ರಮ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ, ಅರುಣ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಪಾರ್ಟಿ ಮುಂದುವರೆಸಿದ್ದಾನೆ.

ಇದನ್ನೂ ಓದಿ: ಮದುವೆಯಾಗವಂತೆ ದುಂಬಾಲು ಬಿದ್ದ ಮಹಿಳೆ: ಬಿದರ್​ನ ಐಬಿಯಲ್ಲಿ ಯುವಕನ ಶವ ಪತ್ತೆ

ಸೂರ್ಯನ ಮೇಲೆ ಅಟ್ಯಾಕ್‌ ಮಾಡಲು ಕಾಯುತ್ತಿದ್ದ ದುಷ್ಕರ್ಮಿಗಳಿಗೆ ವಿಕ್ರಮ್ ಸುಳಿವು ನೀಡಿದ್ದಾನೆ. ‘ಸೂರ್ಯ ಬಿಳಿ ಶರ್ಟ್ ಹಾಕಿದ್ದಾನೆ’ ಎಂದು ಮಾಹಿತಿ ನೀಡಿದ್ದ. ಈ ಮಾತನ್ನು ಕೇಳಿದ ಹಂತಕರು ಸೂರ್ಯನ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಆದರೆ, ದುಷ್ಕರ್ಮಿಗಳು ಬರುತ್ತಿದ್ದಂತೆ ಪಾರ್ಟಿ ಮಾಡುತಿದ್ದ ಸೂರ್ಯ ಮತ್ತು ತಂಡದವರು ತಪ್ಪಿಸಿಕೊಂಡು ಓಡಿದ್ದಾರೆ.

ಹಂತಕರು, ಬಿಳಿ ಶರ್ಟ್ ಧರಿಸಿದ್ದ ಅರುಣ್‌ನನ್ನೇ ಸೂರ್ಯ ಎಂದು ತಪ್ಪಾಗಿ ತಿಳಿದು ಹಿಂಬಾಲಿಸಿದ್ದಾರೆ. ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅರುಣ್‌ನ ಮೇಲೆ ಮನಬಂದಂತೆ ಲಾಂಗು, ಮಚ್ಚು, ಮತ್ತು ಡ್ರ್ಯಾಗರ್‌ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ದಾಳಿಯಾಗುತ್ತಿದ್ದಂತೆ ಅರುಣ್‌ನೊಂದಿಗೆ ಇದ್ದ ಸಂಬಂಧಿ ದೇವರಾಜು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಘಟನೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ