ಮಂಡ್ಯಕ್ಕೆ (Mandya) ಹೊಸತೊಂದು ಗ್ಯಾಂಗ್ ಎಂಟ್ರಿಯಾಗಿದೆ. ಕತ್ತಲಾದ್ರೆ ಸಾಕು ಆ ಗ್ಯಾಂಗ್ ರಾಜಾರೋಷವಾಗಿ ಕೈಯಲ್ಲಿ ಟೂಲ್ಸ್ ಹಿಡಿದು ಓಡಾಡ್ತಾ ಇರುತ್ತದೆ. ಕೈಗೆ ಸಿಕ್ಕವರ ಮೇಲೆ ಲಾಂಗ್ ಬೀಸಿ ಸಿಕ್ಕ ವಸ್ತುಗಳನ್ನ ದೋಚಲು ಮುಂದಾಗಿದೆ (Road Robbery). ಅಷ್ಟಕ್ಕೂ ಆ ಗ್ಯಾಂಗ್ ಆದರೂ ಯಾವುದು ತಡರಾತ್ರಿ ಆಗಿದ್ದಾದರೂ ಏನು ಅಂತೀರಾ? ಈ ಸ್ಟೋರಿ ನೋಡಿ. ಕೈಯಲ್ಲಿ ಲಾಂಗ್ ಹಿಡಿದು ಬೈಕ್ ಮೇಲೆ ಕುಳಿತಿರುವ ವ್ಯಕ್ತಿ. ವೇಗವಾಗಿ ಬೈಕ್ ಚಲಾಯಿಸುತ್ತಿರುವ ಕಿಡಿಗೇಡಿ. ವೇಗವಾಗಿ ಹೋಗುತ್ತಿರುವ ಬೈಕನ್ನ ಚೇಸ್ ಮಾಡುತ್ತಿರುವ ಕಾರು. ಕಾರಿನ ಒಳಗಡೆಯಿಂದ ಮೊಬೈಲ್ ನಲ್ಲಿ ಪುಂಡರ ವಿಡಿಯೋ ಮಾಡುತ್ತಿರುವ ವ್ಯಕ್ತಿ… ಈ ಎಲ್ಲಾ ದೃಶ್ಯ ಕಾಣಸಿಕ್ಕಿದ್ದು ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಮಲ್ಲಿಗೆರೆ ಬಳಿ. ಹೌದು, ಕೆಲಸ ಮುಗಿಸಿ ಬೆಳ್ಳೂರಿನಿಂದ ಮಂಡ್ಯ ಕಡೆ ಬರುವಾಗ ಹೊಸೂರು ಹಾಗೂ ಮಲ್ಲಿಗೆರೆ ಮಾರ್ಗ ಮಧ್ಯೆ ಬರುವ ವೇಳೆ ಪ್ರಸನ್ನ ಎಂಬುವವರ ಕಾರನ್ನ ಅಡ್ಡಗಟ್ಟಿದ ಕೆಲ ಕ್ರಿಮಿಗಳು ಲಾಂಗಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ (Mandya Road Robbery). ಈ ವೇಳೆ ಎಚ್ಚೆತ್ತ ಕಾರಿನ ಚಾಲಕ ಕಾರನ್ನ ತೆಗೆದು ಕೊಂಡು ಎಸ್ಕೇಪ್ ಆಗಿದ್ದಾರೆ.
ಅಸಲಿಗೆ ಆಗಿದ್ದೇನು ಅಂತ ನೋಡೋದಾದ್ರೆ. ಪ್ರಸನ್ನ ಬೆಳ್ಳೂರಿನಲ್ಲಿ ಗ್ಯಾಸ್ ಏಜೆನ್ಸಿಯನ್ನ ಇಟ್ಟಿದ್ದಾರೆ. ದಿನನಿತ್ಯ ಮಂಡ್ಯದಿಂದ ಬೆಳ್ಳೂರಿಗೆ ಅಪ್ ಎಂಡ್ ಡೌನ್ ಮಾಡ್ತಾರೆ. ಮಂಗಳವಾರ ಸಹ ಎಂದಿನಂತೆ ಕೆಲಸ ಮುಗಿಸಿಕೊಂಡು ವಾಪಸ್ಸು ಮಂಡ್ಯದ ಕಡೆ ಮುಖ ಮಾಡಿದ್ದಾರೆ. ಈ ವೇಳೆ ಹೊಸೂರು ಬಳಿ ಸ್ವಿಫ್ಟ್ ಕಾರೊಂದನ್ನ ಅಡ್ಡಗಟ್ಟಿದ ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಚಾಲಕನನ್ನ ಎಳೆದಾಡುತ್ತಿದ್ರು.
ಇದನ್ನ ಗಮನಿಸಿದ ಪ್ರಸನ್ನ ತಮ್ಮ ಪಾಡಿಗೆ ತಾವು ಹೊರಟು ಬಂದಿದ್ದಾರೆ. ಇದಾದ 10 ನಿಮಿಷ ಕಳೆಯುತ್ತಿದ್ದಂತೆ ಸ್ವಿಫ್ಟ್ ಕಾರಿನ ಚಾಲಕ ವೇಗವಾಗಿ ಪ್ರಸನ್ನರವರ ಕಾರನ್ನ ಓವರ್ ಟೇಕ್ ಮಾಡಿಕೊಂಡು ಹೋಗಿದೆ. ಇದಾದ ಬಳಿಕ ಕೈಯಲ್ಲಿ ಲಾಂಗ್ ಹಿಡಿದ ಅಪರಿಚಿತ ವ್ಯಕ್ತಿ ಪ್ರಸನ್ನ ಅವರ ಕಾರನ್ನ ಅಡ್ಡಗಟ್ಟಿ ಲಾಂಗ್ ಬೀಸಿದ್ದಾನೆ. ಅದೃಷ್ಟವಶಾತ್ ಅಂತರ ದೂರವಿದ್ದ ಕಾರಣ ಮಚ್ಚಿನೇಟಿನಿಂದ ಬಚಾವಾಗಿದ್ದಾರೆ.
ಈ ವೇಳೆ ದುಷ್ಕರ್ಮಿಗಳಿಗೆ ಯಾರು ನೀವು, ಯಾಕೆ ಈ ರೀತಿ ಮಾಡ್ತಾಯಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಎಚ್ಚೆತ್ತ ಆಗಂತುಕರು ಎಸ್ಕೇಪ್ ಆಗಿದ್ದಾರೆ. ಇದೇ ವೇಳೆ ಪಟ್ಟು ಬಿಡದ ಪ್ರಸನ್ನ ಬೈಕನ್ನ ನಾಲ್ಕು ಕಿಲೋ ಮೀಟರ್ ಹಿಂಬಾಲಿಸಿ ವಿಡಿಯೋ ಮಾಡಿದ್ದಾರೆ.
ಅದೇನೆ ಹೇಳಿ ಇತ್ತೀಚೆಗೆ ರೋಡ್ ರಾಬರ್ಸ್ ಉಪಟಳ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಕತ್ತಲಾದ ಮೇಲೆ ಆಚೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಕಿ ಪಡೆ ಇಂತಹ ಪುಡಿ ರೌಡಿಗಳಿಗೆ ಕಡಿವಾಣ ಹಾಕ ಬೇಕಿದೆ.
ಇಲ್ದೆ ಹೋದ್ರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕತ್ತಲಾದ ಮೇಲೆ ನೆಮ್ಮದಿಯಿಂದ ಆಚೆ ಬರಲು ಸಾಧ್ಯವಾಗುವುದಿಲ್ಲ. ಸದ್ಯ ಕೆಎ 11 ಇಎಸ್ 3339 ನಂಬರ್ ನ ಡಿಯೋ ಬೈಕ್ ಹಿಂದೆ ಪೊಲೀಸರು ಬಿದ್ದಿದ್ದು ಆದಷ್ಟು ಬೇಗ ಆರೋಪಿಗಳ ಕೈಗೆ ಕೋಳ ತೊಡುಸುವ ಭರವಸೆಯನ್ನ ನೀಡಿದ್ದಾರೆ.
ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ
Published On - 12:40 pm, Thu, 2 February 23