ಮಂಡ್ಯ: ಮನ್ಮುಲ್(Manmul) ರೈತರಿಗೆ ಬಿಗ್ ಶಾಕ್ ಕೊಟ್ಟಿದೆ. ರೈತರಿಂದ(Farmer) ಖರೀದಿಸುವ ಹಾಲಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್) ಲೀಟರ್ ಗೆ 1 ರೂ. ಕಡಿತ ಮಾಡಿ ಆದೇಶ ಹೊರಡಿಸಿದೆ. ಜೂನ್ 1ರಿಂದಲೇ ಪರಿಷ್ಕೃತ ಆದೇಶ ಜಾರಿ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರಿಯಲಿದೆ.
ಮೇ.26ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಜೂ.1 ರಿಂದ ಮುಂದಿನ ಆದೇಶದವರೆಗೆ ಈ ನೂತನ ದರ ಪರಿಷ್ಕರಣೆ ಮುಂದುವರಿಯುತ್ತದೆ ಎಂದು ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ ಪಿ.ಆರ್.ಮಂಜೇಶ್ ಸುತ್ತೋಲೆ ಹೊರಡಿಸಿದ್ದಾರೆ. ಜಿಲ್ಲಾ ಹಾಲು ಒಕ್ಕೂಟವು ಪ್ರತಿದಿನ 9,38,035 ಕೆಜಿ ಹಾಲನ್ನು ಸಂಗ್ರಹಿಸುತ್ತಿದೆ. ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆಯಿಂದ ಉತ್ಪಾದಕರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಸದ್ಯ ನೂತನ ದರದಂತೆ ಸಂಘಗಳಿಗೆ ಶೇ 4.0 ಜಿಡ್ಡು ಮತ್ತು ಶೇ 8.5 ಜಿಡ್ಡೇತರ ಘನಾಂಶಕ್ಕೆ 33.15 ರೂ. ಬದಲು 32.15 ರೂ ಹಾಗೂ ಉತ್ಪಾದಕರಿಗೆ 32.25 ರೂ ಬದಲು 31.25 ರೂ. ನಿಗಧಿಗೊಳಿಸಲಾಗಿದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಅರಂಭವಾಗಿದ್ದು, ಹಸಿರು ಮೇವಿನ ಲಭ್ಯತೆ ಸುಧಾರಿಸಿದೆ. ಹೀಗಾಗಿ ದರ ಕಡಿತ ಮಾಡಲಾಗಿದೆ ಎಂದು ಮನ್‌ಮುಲ್ ಆಡಳಿತ ಮಂಡಳಿ ದರ ಇಳಿಕೆಗೆ ಸಮರ್ಥನೆ ನೀಡಿದ್ದಾರೆ.
ಮಂಡ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ