ಮಂಡ್ಯ, ಜನವರಿ 16: ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ (Melkote Cheluvanarayana Swamy) ದೇವಸ್ಥಾನದ ಜಾಗದ ಮೇಲೂ ಭೂಗಳ್ಳರ ಕಣ್ಣು ಬಿದ್ದಿದೆ. ಮೈಸೂರಿನ ಕೆಸರೆ ಗ್ರಾಮ ವ್ಯಾಪ್ತಿಯಲ್ಲಿರುವ ದೇವಾಲಯದ 14 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿಗೆ ರವಿಕುಮಾರ್ ಎಂಬುವರು ದೂರು ನೀಡಿದ್ದಾರೆ.
ಮೈಸೂರು ಮಹಾರಾಜರು ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇಗುಲಕ್ಕೆ ದೇಣಿಗೆಯಾಗಿ 20 ಎಕರೆ ಭೂಮಿ ನೀಡಿದ್ದಾರೆ. ಈ ಪೈಕಿ 14 ಎಕರೆ ಭೂಮಿಯನ್ನು ನಾಲ್ವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದೆ. ಅಧಿಕಾರಿಗಳು 2001ರಲ್ಲಿ ನಾಲ್ವರ ಹೆಸರಿಗೆ 1973 ರಲ್ಲಿ ಭೂ ಸುಧಾರಣೆ ಕಾಯ್ದೆಯಡಿಯಲ್ಲಿ ಜಮೀನು ಮಂಜೂರಾದಂತೆ ದಾಖಲೆ ಸೃಷ್ಟಿಸಿದ್ದಾರೆ ಎಂಬ ಆರೋಪವಿದೆ. ದೇವಾಲಯದ ಜಮೀನು ಪರಭಾರೆಯಲ್ಲಿ ಕಂದಾಯ ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ
ದೂರುದಾರ ರವಿಕುಮಾರ್ ಜಮೀನನ್ನು ಮತ್ತೆ ದೇವಾಲಯದ ಹೆಸರಿಗೆ ವರ್ಗಾಯಿಸುವಂತೆ ಆಗ್ರಹಿಸಿದ್ದಾರೆ.
ದೂರಿನವ್ವಯ ಮಂಡ್ಯ ಜಿಲ್ಲಾಡಳಿತ ದಾಖಲೆ ಪರಿಶೀಲನೆ ನಡೆಸಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಮಂಡ್ಯ ಎಸಿ ಶಿವಮೂರ್ತಿಯಿಂದ ದಾಖಲೆ ಹಾಗೂ ಜಮೀನು ಪರಿಶೀಲನೆ ನಡೆಸಿದರು. ದೇವಾಲಯದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ಕಾನೂನು ಪ್ರಕಾರ ಸರಿಯಲ್ಲ. ಅಲ್ಲದೇ ಕ್ರಮಬದ್ಧವಾಗಿ ಜಮೀನು ಮಂಜೂರು ಆಗಿದೆಯಾ? ಇಲ್ಲವೇ ಎಂದು ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಮಂಡ್ಯ ಜಿಲ್ಲಾಡಳಿತ ನಿರ್ಧರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ