ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ: ಆಕ್ರೋಶ ವ್ಯಕ್ತಪಡಿಸಿದ ಕ್ಷೇತ್ರದ ಜನರು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2023 | 2:55 PM

ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಚುನಾವಣೆ ವೇಳೆ ಭರವಸೆ ನೀಡಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಇದೀಗ ಮತ್ತೆ ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ್ದು, ಶಾಸಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಮಸ್ಯೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ರೈತರು ಕಂಗಾಲಾಗಿದ್ದಾರೆ‌.

ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ: ಆಕ್ರೋಶ ವ್ಯಕ್ತಪಡಿಸಿದ ಕ್ಷೇತ್ರದ ಜನರು
ಶಾಸಕ ದರ್ಶನ್ ಪುಟ್ಟಣ್ಣಯ್ಯ
Follow us on

ಮಂಡ್ಯ, ನವೆಂಬರ್​​​​ 03: ಬರದ ನಡುವೆಯೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಚುನಾವಣೆ ವೇಳೆ ಭರವಸೆ ನೀಡಿದ್ದರು. ಈ ಹಿಂದೆ ಹೋಗಿ ವಾಪಾಸ್ ಬಂದ ಬಳಿಕ ಕ್ಷೇತ್ರದ ಜನರ ಬಳಿ ಕ್ಷಮೆಯಾಚಿಸಿ ಮತ್ತೆ ವಿದೇಶಕ್ಕೆ ಹೋಗಲ್ಲ‌ ಎಂದಿದ್ದರು. ಆದರೆ ಗೆದ್ದ ಕೆಲವೇ ದಿನಗಳಲ್ಲಿ ಮತ್ತೆ ಅಮೆರಿಕಾಕ್ಕೆ ತೆರಳಿದ್ದಾರೆ.

ಕಳೆದ ಆಗಸ್ಟ್‌ನಲ್ಲೂ ವಿದೇಶಕ್ಕೆ ತೆರಳಿ ಸ್ವಾತಂತ್ರ್ಯ ದಿನಾಚರಣೆಗೆ ಗೈರಾಗಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈಗ ಮತ್ತೆ ಒಂದು ವಾರದ ಹಿಂದೆ ಅಮೆರಿಕಾಕ್ಕೆ ಹೋಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕನ್ನಡ ರಾಜ್ಯೋತ್ಸವಕ್ಕೂ ಗೈರಾಗಿದ್ದಾರೆ.

ಇದನ್ನೂ ಓದಿ: ಮಂಡ್ಯ; ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಹಿಂಪಡೆದ ರೈತ ಸಂಘ

ಕಾವೇರಿ ಸಮಸ್ಯೆ, ಬರ, ಕರೆಂಟ್ ಹೀಗೆ ರೈತರು ಸಾಲು ಸಾಲು ಸಮಸ್ಯೆ ಎದುರಿಸುತ್ತಿದ್ದರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತ್ರ ಡೋಂಟ್ ಕೇರ್​​​​​ ಎನ್ನುತ್ತಿದ್ದಾರೆ. ಶಾಸಕ ದರ್ಶನ್ ನಡೆಗೆ ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಮ್ಮೆ ವಿದೇಶಕ್ಕೆ ಹೋದರೆ ತಿಂಗಳುಗಟ್ಟಲೆ ಕ್ಷೇತ್ರಕ್ಕೆ ಬರಲ್ಲ. ಇಲ್ಲೇ ಇದ್ದು ಜನರ ಸಮಸ್ಯೆ ಸ್ಪಂದಿಸಲು ಅವರನ್ನು ಗೆಲ್ಲಿಸಿದ್ದೇವೆ. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಶಾಸಕರು ಪದೇ ಪದೇ ವಿದೇಶಕ್ಕೆ ಹೋಗುತ್ತಿದ್ದಾರೆ. ಸಮಸ್ಯೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ರೈತರು ಕಂಗಾಲಾಗಿದ್ದಾರೆ‌. ಶಾಸಕರು ವಿದೇಶ ಮರೆತು ಕ್ಷೇತ್ರದಲ್ಲಿ ಉಳಿದುಕೊಂಡು ಜನಪರ ಕೆಲಸ ಮಾಡುವಂತೆ  ಪಟ್ಟುಹಿಡಿದಿದ್ದಾರೆ.

ಬಸ್ ಸೌಕರ್ಯ ಒದಗಿಸುವ ಮೂಲಕ ವಿದ್ಯಾರ್ಥಿಗಳ ನೆರವಿಗೆ ನಿಂತ ಶಾಸಕ ಎಚ್.ಟಿ.ಮಂಜು

ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿ ಕಾಲೇಜುವರೆಗೂ ಕೆಎಸ್​ಆರ್​ಟಿಸಿ ಬಸ್​​ ಸೌಕರ್ಯ ಒದಗಿಸುವ ಮೂಲಕ ಶಾಸಕ ಜೆಡಿಎಸ್ ಶಾಸಕ ಎಚ್.ಟಿ.ಮಂಜು ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ಎರಡು ಕಿ.ಮೀ ದೂರ ಇರುವ ಕಾಲೇಜುವರೆಗೂ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್​ ನೀಡಿದ್ದಾರೆ.
ಪಟ್ಟಣದಿಂದ ಎರಡು ಕಿ.ಮೀ.ದೂರದಲ್ಲಿ ಮಹಿಳಾ ಕಾಲೇಜು, ಪ್ರಥಮ ದರ್ಜೆ, ಹಾಗೂ ಸ್ನಾತಕ, ಡಿಪ್ಲೋಮೋ , ಪಿಯು ಕಾಲೇಜುಗಳಿವೆ.

ಇದನ್ನೂ ಓದಿ: ಜಾತಿ ಗಣತಿ ವರದಿ: ಅತ್ತ ಹೈಕಮಾಂಡ್, ಇತ್ತ ಸಮುದಾಯ: ಅಡ್ಡಕತ್ತರಿಯಲ್ಲಿ ಸಿಲುಕಿದ ಡಿಕೆ ಶಿವಕುಮಾರ್

ಕೆ.ಆರ್.ಪೇಟೆಯಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜುವರೆಗೂ ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ‌ ನೀಡಲಾಗಿದೆ. ಬಸ್ ಸೌಕರ್ಯ ಒದಗಿಸಿದ ಶಾಸಕರ ಕೆಲಸಕ್ಕೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.