ಮಂಡ್ಯ, ಜೂನ್ 27: ಕೃಷ್ಣರಾಜ ಸಾಗರ (KRS) ಜಲಾಶಯದ ಹಿನ್ನೀರು ಪ್ರದೇಶ ಒತ್ತುವರಿ ಬಗ್ಗೆ ಟಿವಿ9 ವರದಿ ಪ್ರಸಾರ ಬಳಿಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಒತ್ತುವರಿಯನ್ನು ತಡೆದಿದ್ದಾರೆ. ಕೆಆರ್ಎಸ್ ಜಲಾಶಯದ ಹಿನ್ನೀರಿನ ಪ್ರದೇಶದ ಜಾಗವನ್ನು ಒತ್ತುವರಿ ಮಾಡಲಾಗುತ್ತಿತ್ತು. ಕೇರಳ (Kerala) ಮೂಲದ ನಕೇಶ್ ಜಾನ್ ಮ್ಯಾಥ್ಯೂ ಎಂಬವರು ಜೆಸಿಬಿ ಮೂಲಕ ಜಲಾಶಯದ ಭೂಮಿಯಲ್ಲಿ ಗುಂಡಿ ತೆಗೆಸಿ ದೊಡ್ಡ ದೊಡ್ಡ ಕಲ್ಲುಗಳನ್ನು ಗುಂಡಿಯಲ್ಲಿ ಹಾಕಿ ಭೂಮಿಯನ್ನ ಒತ್ತುವರಿ ಮಾಡಲು ಮುಂದಾಗಿದ್ದರು.
ಮ್ಯಾಥ್ಯೂ ಅವರು ಪಾಂಡವಪುರ ತಾಲೂಕಿನ ಚಿಕ್ಕಾರಳ್ಳಿ ಗ್ರಾಮದ ಸರ್ವೆ ನಂಬರ್ 279ರಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಜಮೀನನ ಪಕ್ಕದಲ್ಲೇ ಡ್ಯಾಂನ ಹಿನ್ನೀರಿನ ಜಾಗವಿದೆ. ಆ ಜಾಗವನ್ನು ಇದೀಗ ಒತ್ತುವರಿ ಮಾಡಲು ಮುಂದಾಗಿದ್ದರು. ಸ್ಥಳೀಯ ಜನಪ್ರತಿನಿಧಿಗಳು, ರಾಜಕಾರಣಿಗಳ ಸಹಾಯದಿಂದ ಅತಿಕ್ರಮಣ ಮಾಡಿ, ಭೂಮಿಯನ್ನ ಒತ್ತುವರಿ ಮಾಡುತ್ತಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿತ್ತು.
ಈ ಬಗ್ಗೆ ಟಿವಿ9 ವಿಸ್ತೃತ ವರದಿ ಮಾಡಿದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಕ್ರಮ ಒತ್ತುವರಿಗಾಗಿ ತೆಗೆಯಲಾಗಿದ್ದ ಗುಂಡಿ ಮುಚ್ಚಲು ಸೂಚನೆ ನೀಡಿದ್ದಾರೆ. ಬಳಿಕ ಜೆಸಿಬಿ ಸಹಾಯದಿಂದ ಜಮೀನು ಮಾಲೀಕ ಗುಂಡಿ ಮುಚ್ಚಿದ್ದಾನೆ.
ಇದನ್ನೂ ಓದಿ: ಕೇಂದ್ರ ಹಾಗೂ ರಾಜ್ಯ ಸಚಿವರ ನಡುವೆ ಜಟಾಪಟಿ: ಮಂಡ್ಯದಲ್ಲಿ ನೂತನ ಸಕ್ಕರೆ ಕಾರ್ಖಾನೆಗೆ ವಿರೋಧ
ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಎಸ್ಇ ರಘುರಾಮನ್ ಮಾತನಾಡಿ, ಗಮನಕ್ಕೆ ಬಂದಿದ್ದು, ಸ್ಥಳ ಪರಿಶೀಲನೆ ಮಾಡಲಾಗಿದ್ದು, ಒತ್ತುವರಿ ಮಾಡುವುದನ್ನು ಈಗಾಗಲೇ ತಡಿಯಲಾಗಿದೆ. ಜಂಟಿ ಸರ್ವೆ ನಡೆಸಿ ವರದಿ ಬರುವವರೆಗೂ ಯಾವುದೇ ಕಾಮಗಾರಿ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ, ಹಳೇ ಮೈಸೂರು ಭಾಗದ ಜನರ ಜೀವನಾಡಿ. ಇದೇ ಜಲಾಶಯವನ್ನು ನಂಬಿಕೊಂಡು ಲಕ್ಷಾಂತರ ರೈತರು ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಕೃಷ್ಣ ರಾಜ ಸಾಗರ ಅಣೆಕಟ್ಟನ್ನು 1924 ರಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು. ಇದು ಮೈಸೂರು ಮತ್ತು ಮಂಡ್ಯದಲ್ಲಿ ನೀರಾವರಿಗೆ ಪ್ರಮುಖ ನೀರಿನ ಮೂಲವಾಗಿದೆ. ಕೆಲ ತಿಂಗಳ ಹಿಂದೆ ಕೆಆರ್ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ ಹೇರಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಕೆಆರ್ಎಸ್ನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಆದೇಶ ನೀಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 am, Thu, 27 June 24