ಮಂಡ್ಯ: ಕೊಲೆಯಾಗಿರುವ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಯುವಕ ಗೋವಾದಲ್ಲಿ ಪತ್ತೆಯಾಗಿದ್ದಾನೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ನಿವಾಸಿ ಮನು ಎಂಬಾತ ತಾನು ಕೊಲೆಯಾಗಿರುವ ರೀತಿ ಬಿಂಬಿಸಿ ಕೊಂಡಿದ್ದ. ಮನೆಯಲ್ಲಿ ಕೋಳಿ ರಕ್ತ ಚೆಲ್ಲಿ, ತಲೆಯ ವಿಗ್ ಬಿಸಾಡಿ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದಾನೆ ಎಂಬ ರೀತಿಯಲ್ಲಿ ಜನರನ್ನು ನಂಬಿಸಿ ಗೋವಾ ಟ್ರಿಪ್ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾನೆ. ಸದ್ಯ ಪೊಲೀಸರು ಈ ಐನಾತಿ ಯುವಕನ ಆಟ ಬಯಲು ಮಾಡಿದ್ದಾರೆ.
ತನ್ನ ಎದುರಾಳಿಗೆ ಮಣ್ಣು ಮುಕ್ಕಿಸಲೇ ಬೇಕೆಂದು ಡಿಸೈಡ್ ಮಾಡ್ಕೊಂಡ ಮನು ತನ್ನನ್ನ ತಾನೆ ಕೊಲೆಯಾಗಿರುವುದಾಗಿ ಬಿಂಬಿಸಿ ಕೊಂಡಿದ್ದ. ಸುಪ್ರಿಯಾ ಎಂಬಾಕೆಗೆ 8 ಲಕ್ಷ ಸಾಲ ಕೊಟ್ಟಿದ್ದ ಮನು ಆಕೆಯ ಬಳಿ ಬ್ಲ್ಯಾಂಕ್ ಚೆಕ್ ಪಡೆದಿದ್ದ. ಕೊಟ್ಟ ಸಾಲವನ್ನ ಮರು ಪಾವತಿ ಮಾಡುವಂತೆ ದುಂಬಾಲು ಬಿದ್ದಿದ್ದ. ಆದ್ರೆ ಸುಪ್ರಿಯಾ ಬಳಿ ಹಣ ಇರ್ಲಿಲ್ಲ ಹಾಗಾಗಿ ತನ್ನ ಸ್ನೇಹಿತನೊಂದಿಗೆ ಕಷ್ಟವನ್ನ ಹೇಳಿ ಕೊಂಡಿದ್ರು. ಆಗ ಮನು ಮೊಬೈಲ್ ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಸಲಗ ಮೂವಿಯಲ್ಲಿ ಮರ್ಡರ್ ಮಾಡೋ ರೀತಿ ಹೊಡೆದಾಕ್ತಿವಿ. ನಿನ್ನ ಬಳಿ ಇರೋ ಆ ಖಾಲಿ ಚೆಕನ್ನ ಕೊಟ್ಟು ಬಿಡು ಎಂದು ವಾರ್ನ್ ಮಾಡಿದ್ದ. ಯಾವಾಗ ಅಪರಿಚಿತ ವ್ಯಕ್ತಿ ಮನುಗೆ ಕಾಲ್ ಮಾಡಿ ಧಮ್ಕಿ ಹಾಕ್ತಾನೋ ಆಗ ಹೇಗಾದ್ರು ಮಾಡಿ ಇವ್ರಿಗೆ ಬುದ್ದಿ ಕಲಿಸಲೇ ಬೇಕೆಂದು ಡಿಸೈಡ್ ಮಾಡ್ಕೊಂಡು ಮಾಸ್ಟರ್ ಪ್ಲಾನ್ ಮಾಡಿದ್ದ.
ಕೋಳಿಯೊಂದನ್ನ ತಂದು ಅದರ ಕತ್ತು ಕೊಯ್ದು ರಕ್ತವನ್ನೆಲ್ಲ ಮನೆಯ ಗೋಡೆಯ ಮೇಲೆ ಚೆಲ್ಲಿ ಬಳಿಕ ತಲೆಯ ವಿಗ್ ಬಿಸಾಡಿ ಮೊಬೈಲನ್ನು ಕಲ್ಲಿನಿಂದ ಚೆಚ್ಚಿ ಹಾಕಿದ್ದಾನೆ. ಬಳಿಕ ಅಪರಿಚಿತ ವ್ಯಕ್ತಿ ಅವಾಜ್ ಹಾಕಿದ್ದ ಆಡಿಯೋವನ್ನು ತನ್ನೂರಿನ ಸ್ನೇಹಿತರಿಗೆ ಸೆಂಡ್ ಮಾಡಿದ್ದಾನೆ. ಕ್ಯಾಬ್ ಮಾಡ್ಕೊಂಡು ಊರು ಬಿಟ್ಟಿದ್ದಾನೆ. ಮನೆಯಲ್ಲಿ ರಕ್ತವನ್ನು ಕಂಡ ಜನ ಮನು ಕೊಲೆಯಾಗಿದೆ ಎಂದು ಭಾವಿಸಿ ಈ ವಿಚಾರವನ್ನು ಅರಕೆರೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಪಾಟ್ ಗೆ ಓಡೋಡಿ ಬಂದು ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಮಾಡ್ಕೊಂಡು ಸುಪ್ರಿಯಾಳನ್ನ ಠಾಣೆಗೆ ಕರೆಸಿ ತನಿಖೆ ಮಾಡಿದ್ರು. ಆದ್ರೆ ಕೊಲೆಯಾಗಿದ್ದೇನೆಂದು ಬಿಂಬಿಸಿದ್ದ ಮನು ಗೋವಾದಲ್ಲಿ ಜಾಲಿಯಾಗಿ ತಿರುಗಾಡಿ ಕೊಂಡಿದ್ದ. ಮನುನ ಮತ್ತೊಂದು ಮೊಬೈಲ್ ಟ್ರ್ಯಾಕ್ ಮಾಡಿದ ಖಾಕಿ ಪಡೆ ಕೊನೆಗೂ ಮನುವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ತನ್ನ ವೈರಿಗಳ ಮೇಲೆ ಸೇಡು ತೀರಿಸಿ ಕೊಳ್ಳಲು ಮನು ಈ ರೀತಿ ಮಾಡಿದ್ದು ಈಗ ಬಟಾ ಬಯಲಾಗಿದೆ. ಆದ್ರೆ ಈ ಪ್ರಕರಣದಲ್ಲಿ ನಿಜಕ್ಕು ಬೆಪ್ಪರಾಗಿದ್ದು ಪೊಲೀಸರು ಮಾತ್ರ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ