ಮಂಗಳೂರು: ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆದಂಕೂರು ಬಳಿಯ ನೇತ್ರಾವತಿ ನದಿಯಲ್ಲಿ ಭಾನುವಾರ ರಾತ್ರಿ 65 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ವಿಶ್ವನಾಥ ಎಂದು ಗುರುತಿಸಲಾಗಿದೆ. ರಕ್ತದೊತ್ತಡ ತಪಾಸಣೆ ನಡೆಸಿ ಬರುವುದಾಗಿ ಹೇಳಿ ಹೋಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನು ಪರೀಕ್ಷಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಶನಿವಾರ ಬೆಳಗ್ಗೆ ರಕ್ತದೊತ್ತಡವನ್ನು ಪರೀಕ್ಷೆ ಮಾಡಿ ಬರುವುದಾಗಿ ಹೇಳಿದ ಹೋಗಿದ್ದ ವಿಶ್ವನಾಥ್ ಅವರು ಮನೆಗೆ ವಾಪಸ್ಸಾಗಿಯೇ ಇಲ್ಲ. ಈ ವೇಳೆ ಗಾಬರಿಗೊಂಡ ಕುಟುಂಬಸ್ಥರು ಎಷ್ಟೇ ಹುಡುಕಾಟಿದರೂ, ಎಷ್ಟೇ ವಿಚಾರಿಸಿದರೂ ಸುಳಿವೇ ಸಿಕ್ಕಿಲ್ಲ. ಸಂಜೆಯಾಗುತ್ತಲೇ ಪೊಲೀಸ್ ಠಾಣಾ ಮೆಟ್ಟಿಲು ಹತ್ತಿದ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದರು. ದುರಂತವೆಂದರೆ ಆ ವ್ಯಕ್ತಿ ಮತ್ತೆ ಸಿಕ್ಕಿದ್ದ ಭಾನುವಾರ ರಾತ್ರಿ ಶವವಾಗಿ.
ಜುಲೈ 24 ರಂದು ರಾತ್ರಿ 9 ಗಂಟೆಗೆ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ, ಮೃತರನ್ನು ಮಂಗಳೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ ವಿಶ್ವನಾಥ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ನಮಗೆ ತಿಳಿದುಬಂದಿತು. ಪರೀಕ್ಷಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹಿಂದೂಸ್ತಾನ್ ಟೈಮ್ಸ್ ಜೊತೆ ಮಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಂಗಳೂರಿನಲ್ಲಿ ರಕ್ತದೊತ್ತಡ ತಪಾಸಣೆಗೆ ಹೋಗುವುದಾಗಿ ವಿಶ್ವನಾಥ್ ಅವರು ಕುಟುಂಬಸ್ಥರಿಗೆ ತಿಳಿಸಿದ್ದರು. ಅವರು ಸಂಜೆಯಾದರೂ ಮನೆಗೆ ಬಾರದಿದ್ದಾಗ ಹುಡುಕಾಡಿದರು. ಅದಾಗ್ಯೂ ಸುಳಿವು ಸಿಗದಿದ್ದಾಗ ಸಂಜೆ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಭಾರೀ ಮಳೆಯಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು, ಹೀಗಾಗಿ ನದಿ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ನದಿಗೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿತ್ತು.
Published On - 3:00 pm, Mon, 25 July 22