ಇಂದು ಕಾರ್ಗಿಲ್ ವಿಜಯ ದಿವಸ. 1999 ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮತ್ತು ವೀರ ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಂದು ಭಾರತೀಯರು ಯೋಧರ ಧೈರ್ಯ, ಸಾಹಸಕ್ಕೆ ಪತರಗುಟ್ಟಿದ ಪಾಕಿಸ್ತಾನಿ ಸೇನೆ ಕಾರ್ಗಿಲ್‌ನಿಂದ ಕಾಲ್ಕಿತ್ತು ಓಡಿ ಹೋಗಿ ಇಂದಿಗೆ 25 ವರ್ಷಗಳು ಸಂದಿವೆ. ಈ ಯುದ್ಧದಲ್ಲಿ ಅನೇಕ ಸೈನಿಕರು ದೇಶಕ್ಕಾಗಿ ರೋಷಾವೇಶದಿಂದ ಹೋರಾಡಿದ್ದಾರೆ. ಈ ಯುದ್ಧದಲ್ಲಿ ಹೋರಾಡಿದವರಲ್ಲಿ ಮಂಗಳೂರಿನ ಯೋಧ ಪ್ರವೀಣ್ ಶೆಟ್ಟಿ ಕೂಡಾ ಒಬ್ಬರು. 17 ನೇ ವಯಸ್ಸಿಗೆ ಸೇನೆಗೆ ಸೇರಿ 18ನೇ ವಯಸ್ಸಿಗೆ ಕಾರ್ಗಿಲ್ ಯುದ್ಧದಲ್ಲಿ ಭಾಗವಸಿದ್ದ ಈ ವೀರ ಯೋಧ ಕಾರ್ಗಿಲ್ ಯುದ್ಧದ ರೋಚಕತೆ ಮತ್ತು ಅನುಭವವನ್ನು ಟಿವಿ9 ಜತೆಗೆ ಹಂಚಿಕೊಂಡಿದ್ದಾರೆ.
1999 ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಕೆಚ್ಚೆದೆಯ ಸೈನಿಕರಲ್ಲಿ ಮಂಗಳೂರಿನ ತೊಕ್ಕೊಟು ಸಮೀಪದ ಪಿಲಾರು ನಿವಾಸಿ ಪ್ರವೀಣ್ ಶೆಟ್ಟಿ ಕೂಡಾ ಒಬ್ಬರು. 1997 ರಲ್ಲಿ ತನ್ನ 17 ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರಿದ ಪ್ರವೀಣ್ ಒಂದು ವರ್ಷ ನಾಸಿಕ್‌ನಲ್ಲಿ ಟ್ರೈನಿಂಗ್ ಮುಗಿಸಿ ನಂತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಕರ್ತವ್ಯಕ್ಕೆ ಹಾಜರಾದರು. ಕರ್ತವ್ಯಕ್ಕೆ ಹಾಜರಾಗಿ ಆರು ತಿಂಗಳ ಬಳಿಕ ಅಂದ್ರೆ 1999 ರ ಮೇ ತಿಂಗಳಲ್ಲಿ 36 ದಿನಗಳ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಹೀಗೆ ಊರಿಗೆ ಬಂದ ಎರಡೇ ದಿನದಲ್ಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂಬ ಟೆಲಿಗ್ರಾಮ್ ಬಂದಿತ್ತು. ಸೇನೆಯಲ್ಲಿ ಬಾಕ್ಸಿಂಗ್, ವಾಲಿಬಾಲ್ ಇತ್ಯಾದಿ ಗೇಮ್‌ಗಳಲ್ಲಿ ಭಾಗವಹಿಸುತ್ತಿದ್ದ ಪ್ರವೀಣ್ ಬಹುಶಃ ಏನೋ ಸ್ಪೋರ್ಟ್ ಈವೆಂಟ್ ಇರಬೇಕು ಅದಕ್ಕೆ ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಹೇಳಿದ್ದು ಎಂದು ತಿಳಿದು ಮರುದಿನ ಮುಂಬೈ ಟ್ರೈನ್ ಹತ್ತಿ, ಅಲ್ಲಿಂದ ಜಮ್ಮು ಕಾಶ್ಮೀರಕ್ಕೆ ತೆರಳುತ್ತಾರೆ. ಹೀಗೆ ಶ್ರೀನಗರ ತಲುಪುವರೆಗೂ ಪ್ರವೀಣ್ ಮಾತ್ರವಲ್ಲದೆ ಯಾರೊಬ್ಬರಿಗೂ ಕಾರ್ಗಿಲ್ ಯುದ್ಧದ ಸುಳಿವು ಸಿಕ್ಕಿರಲಿಲ್ಲ. ಅದರ ಆ ನಂತರ ನಡೆದಿದ್ದೆಲ್ಲಾ ಇತಿಹಾಸ.
ಆಪರೇಷನ್ ವಿಜಯ್ ಕಾರ್ಯಚರಣೆಯಲ್ಲಿ ಪ್ರವೀಣ್ ಅಂದಿನ ಕಾಲದಲ್ಲಿ ವಿಶ್ವದ ಏಕೈಕ 244 ಹೆವಿ ಮೋಟರ್ ರೆಜಿಮೆಂಟ್‌ನಲ್ಲಿದ್ದರು. ಈ ಕಾರ್ಯಾಚರಣೆಯ ಭಾಗವಾಗಿ ಪ್ರವೀಣ್ ತಂಡ ಬಾರಾಮುಲ್ಲಾದಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಸೋನಾ ಮಾರ್ಗ್ ಸೇನಾ ನೆಲೆಯ ಮುಂದೆ ಸೇನಾ ಟ್ರಕ್ ಬಂದು ನಿಂತಿತ್ತು. ಕುತೂಹಲದಿಂದ ಏನಿರಬಹುದು ಎಂದು ಸೇನಾ ವಾಹನವನ್ನು ಇಣುಕಿ ನೋಡಿದಾಗ ಪ್ರವೀಣ್ ಶೆಟ್ಟಿ ತಂಡಕ್ಕೆ ಆಘಾತವೊಂದು ಕಾದಿತ್ತು. ಸೇನಾ ವಾಹನದಲ್ಲಿ ಸೈನಿಕರ ರಕ್ತಸಿಕ್ತ ದೇಹಗಳಿದ್ದವು. ಇನ್ನೊಂದು ಆಘಾತಕಾರಿ ಸಂಗತಿಯೇನೆಂದರೆ ತನ್ನದೇ ರೆಜಿಮೆಂಟ್‌ನ ಸೈನಿಕ ಕಾಮರಾಜ್ ಅವರ ಛಿದ್ರವಾದ ದೇಹವು ಅದರಲ್ಲಿತ್ತು. ಇದನ್ನೆಲ್ಲಾ ನೋಡಿ ಜೊತೆಗಿದ್ದ ಸೈನಿಕರನ್ನು ಬಲಿ ತೆಗೆದುಕೊಂಡವರನ್ನು ಸುಮ್ಮನೆ ಬಿಡಬಾರದು, ಹೇಗಾದರೂ ಮಾಡಿ ಈ ಪಾಪಿಗಳ ಅಟ್ಟಹಾಸವನ್ನು ಮೆಟ್ಟಿ ನಿಲ್ಲಬೇಕು ಎಂದು ಪ್ರವೀಣ್ ಅವರ ಮನಸ್ಸು ಪ್ರತಿಕಾರ ಮತ್ತು ರೋಷದಿಂದ ಕುದಿಯತೊಡಗಿತು.
ಇದೇ ರೋಷದಿಂದ ಶತ್ರು ಸೈನಿಕರ ಮೇಲೆ ದಾಳಿ ನಡೆಸುತ್ತಾ ಹೋಗಿ 1999 ಜೂನ್ 10 ಮತ್ತು 11 ನೇ ತಾರಿಕೀನಂದು ತಮ್ಮ ತಂಡ ಹಾಗೂ ರಾಜಪೂತ್ ರೈಫಲ್ ತಂಡ ಶತ್ರು ಸೈನ್ಯ ವಶಪಡಿಸಿಕೊಂಡಿದ್ದ ತೊಲೊಲಿಂಗ್ ಪ್ರದೇಶದ ಮೇಲೆ ದಾಳಿ ನಡೆಸಿ, 47 ಪಾಕ್ ಸೈನಿಕರ ರುಂಡ ಚೆಂಡಾಡಿ ಪರಾಕ್ರಮ ಮರೆದು ಆ ಪ್ರದೇಶವನ್ನು ಮತ್ತೆ ವಶಕ್ಕೆ ಪಡೆದವು ಎಂದು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಪ್ರವೀಣ್.
ಇದನ್ನೂ ಓದಿ : ಬಡತನ ಕಣ್ಣಮುಂದೆ, ಕೆಲಸ ಹುಡುಕುತ್ತಿದ್ದ ವೇಳೆ ಸಿಕ್ಕಿದ್ದೇ ದೇಶ ಸೇವೆ: ಮಹೇಶ್ ಮಂಜುನಾಥ್ ನಾಯ್ಕ್
ತೊಲೊಲಿಂಗ್ ಪರ್ವತ ಮಾತ್ರವಲ್ಲದೆ ಟೈಗರ್ ಹಿಲ್, ಮುಶ್ಕೋಹ್ ವ್ಯಾಲಿ, ಬೆಟಾಲಿಕ್ ಸೆಕ್ಟರ್ ಮುಂತಾದ ಕಠಿಣ ಪರ್ವತ ಶ್ರೇಣಿಗಳಲ್ಲೂ ಪ್ರವೀಣ್ ಅವರಿದ್ದ ಹೆವಿ ಮೋಟಾರ್ ರೆಜಿಮೆಂಟ್ ಶತ್ರುಗಳ ವಿರುದ್ಧ ಯುದ್ಧ ಮಾಡಿದೆ. ಬೆಟಾಲಿಕ್ ಸೆಕ್ಟರ್‌ನಲ್ಲಿ ಯುದ್ಧ ನಡೆದಾಗ ಶತ್ರು ಸೇನೆ ಏರ್ ಬ್ಲಾಸ್ಟ್ ನಡೆಸಿತು. ಇದರಲ್ಲಿ ಪ್ರವೀಣ್ ಅವರ ತಂಡದೊಂದಿಗಿದ್ದ ಕೊಡಗಿನ ಯೋಧ ಕಾವೇರಪ್ಪ ಗಂಭೀರವಾಗಿ ಗಾಯಗೊಂಡರು, ಹಾಗೂ ರಾಜಸ್ಥಾನದ ಯೋಧ ದಶರಥ್ ಶತ್ರುಗಳ ದಾಳಿಗೆ ಹುಹಾತ್ಮರಾದರು. ಗಂಭೀರವಾಗಿ ಗಾಯಗೊಂಡ ಕಾವೇರಪ್ಪ ಅವರನ್ನು ಪ್ರವೀಣ್ ಹಾಗೂ ಇತರೆ ನಾಲ್ಕು ಸೈನಿಕರು 4 ಗಂಟೆಗಳ ಕಾಲ ಹೊತ್ತುಕೊಂಡು ಬಂದು ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ತಲುಪಿಸಿ, ರೋಷದಿಂದ ಮುನ್ನುಗ್ಗಿ ಶತ್ರುಗಳ ವಿರುದ್ಧ ಹೋರಾಟ ನಡೆಸಿದರು. ಟೈಗರ್ ಹಿಲ್ ಮೇಲೆ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಪ್ರದೇಶದ ಬಳಿಯ ಸ್ಯಾಂಡೋನಾಳಲ್ಲಿ ಪ್ರವೀಣ್ ಶೆಟ್ಟಿ ತಂಡ ದಾಳಿ ನಡೆಸಿ, ಶತ್ರುಗಳ ಬಂಕರ್ ನಾಶ ಮಾಡಿ ವಿಜಯ ಪತಾಕೆಯನ್ನು ಹಾರಿಸಿದರು. ಹೀಗೆ ಸುಮಾರು 16 ದಿನಗಳ ಕಾಲ ನಿದ್ದೆ, ಸ್ನಾನ, ಸರಿಯಾದ ಊಟವಿಲ್ಲದೆ ಕೆಚ್ಚೆದೆಯಿಂದ ಹೋರಾಡಿ ಶತ್ರುಗಳ ಅಟ್ಟಹಾಸವನ್ನು ಮೆಟ್ಟಿ ನಿಂತೆವು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಯೋಧ ಪ್ರವೀಣ್ ಶೆಟ್ಟಿ.
16 ವರ್ಷಗಳ ಕಾಲ ದೇಶ ಸೇವೆ ಮಾಡಿದ ಮಾಡಿದ ಪ್ರವೀಣ್ ಆಪರೇಷನ್ ವಿಜಯ್, ಆಪರೇಷನ್ ವಿಜಯ್ ಸ್ಟಾರ್, ಆಪರೇಷನ್ ರಕ್ಷಕ್, ಆಪರೇಷನ್ ಪರಾಕ್ರಮ್ ಪದಕಗಳನ್ನು ಗಳಿಸಿದ್ದಾರೆ. ಅದರಲ್ಲಿ ಅಪರೇಷನ್ ವಿಜಯ್ ಸ್ಟಾರ್ ಪದಕ ಗಳಿಸಿದ ದಕ್ಷಿಣ ಕನ್ನಡದ ಏಕೈಕ ಯೋಧ ಎಂಬ ಹೆಗ್ಗಳಿಕೆ ಪ್ರವೀಣ್ ಶೆಟ್ಟಿಯವರದ್ದಾಗಿದೆ. ಸೇನೆಯಿಂದ ನಿವೃತ್ತರಾಗಿ ಪ್ರಸ್ತುತ ಪ್ರವೀಣ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾನದ ಕೆನರಾ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:11 am, Fri, 26 July 24