ಮಂಗಳೂರು: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿ 2015ರಲ್ಲಿ ಆರಂಭಗೊಂಡಿದ್ದ ಟೋಲ್ ಪ್ಲಾಜಾ (surathkal toll plaza)ವನ್ನು ಕೇಂದ್ರ ಸರ್ಕಾರ ಕೊನೆಗೂ ರದ್ದು ಮಾಡಿದೆ. ಟೋಲ್‌ಗೇಟ್ ವಿರುದ್ಧ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ಟೋಲ್‌ಗೇಟನ್ನು ರದ್ದುಗೊಳಿಸಿದೆ. ಆದರೆ ರದ್ದುಗೊಳಿಸಿರುವ ಟೋಲ್‌ಗೇಟ್ ಅನ್ನು ಪಕ್ಕದ ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಯಾಕಂದರೆ ಇನ್ನುಮುಂದೆ ಹೆಜಮಾಡಿ ಟೋಲ್‌ಗೇಟ್ (Hejamadi toll plaza)ನಲ್ಲಿ ವಾಹನ ಸವಾರರು ಸುರತ್ಕಲ್ ಟೋಲ್‌ಪ್ಲಾಜಾದ ಹಣವನ್ನು ಸೇರಿಸಿ ಕಟ್ಟಿ ಪ್ರಯಾಣಿಸಬೇಕಾಗಿದೆ. ಸದ್ಯ ವಿಲೀನ ಪ್ರಕ್ರಿಯೆ ಮುಗಿದಿದ್ದು ಹೆಜಮಾಡಿ ಟೋಲ್‌ಪ್ಲಾಜಾದಲ್ಲಿ ಹೆಚ್ಚಿನ ದರ ನಿಗದಿಯ ನೋಟಿಫೀಕೆಶನ್ ಇನ್ನಷ್ಟೇ ಆಗಬೇಕಾಗಿದೆ.
ಈಗಾಗಲೇ ಹೋರಾಟ ಮುಕ್ತಾಯವಾದ ಬೆನ್ನಲ್ಲೇ ಇದೀಗ ಟೋಲ್ಗೇಟ್ಗಳನ್ನು ಮತ್ತೊಂದು ಟೋಲ್ ಗೇಟ್ಗೆ ವಿಲೀನ ಮಾಡಿರುವ ಆರೋಪ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಆದರೆ ಬಿಜೆಪಿ ಸರ್ಕಾರ ಜನರ ಪರವಾಗಿ ಇಲ್ಲದಿರುವುದರಿಂದ ಟೋಲ್ ಗೇಟ್ ಅನ್ನು ವಿಲೀನಗೊಳಿಸುವ ಸಾಧ್ಯತೆ ಇದೆ. ಹೀಗೆ ವಿಲೀನ ಮಾಡಿದರೆ ತಕ್ಕ ಉತ್ತರವನ್ನು ನೀಡಲು ಸಿದ್ಧರಿದ್ದೇವೆ ಎಂದು ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಇದನ್ನೂ ಓದಿ: ಹರೇಕಳ ಗ್ರಾಮ ಪಂಚಾಯಿತಿ ನೂತನವಾಗಿ ನಿರ್ಮಿಸಿದ ಗೋಡೆ ಮೇಲೆ ಹಾಜಬ್ಬನವರ ಚಿತ್ರ ಬಿಡಿಸಿ ಗೌರವ
ಕಾಂಗ್ರೆಸ್ ಸರ್ಕಾರವೇ ಟೋಲ್‌ಗೇಟ್ ಆರಂಭಿಸಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಭಾ ಕುಳಾಯಿ, ಟೋಲ್‌ಗೇಟ್ ವಿರುದ್ಧ ಹೋರಾಟ ಆರಂಭಿಸಿ ಏಳು ವರ್ಷಗಳು ಆಗಿವೆ. ಈ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ಅವರೇ ಕೇಂದ್ರದಲ್ಲಿ ಇದ್ದಾರೆ. ಆಗ ನಾವು ಕಾರ್ಪೊರೇಟರ್ ಆಗಿದ್ದೆವು. ಅಂದಿನಿಂದಲೂ ಇಂದಿನವರೆಗೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದರು.
ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಕೆ.ಎ 19 ನೋಂದಣಿ ಹೊಂದಿರುವ ಖಾಸಗಿ ವಾಹನ ಸವಾರರಿಗೆ ಟೋಲ್‌ನಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇನ್ನುಮುಂದೆ ಮಂಗಳೂರಿನಿಂದ ಉಡುಪಿ ಕಡೆ ಪ್ರಯಾಣಿಸುವ ಎಲ್ಲಾ ವಾಹನಗಳು ಸುರತ್ಕಲ್ ಟೋಲ್‌ಪ್ಲಾಜಾದ ಹೆಚ್ಚುವರಿ ಹಣವನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಪಾವತಿ ಮಾಡಿಯೇ ಹೋಗಬೇಕಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಲಾಭಕ್ಕಿಂತ ನಷ್ಟವೇ ಉಂಟಾಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಶಾಸಕ ಭರತ್ ಶೆಟ್ಟಿ, ಕಾಂಗ್ರೆಸ್‌ನವರು ಆರಂಭಿಸಿದ್ದ ಟೋಲ್‌ಗೇಟ್‌ನ್ನು ನಾವು ನಿಲ್ಲಿಸಿದ್ದೇವೆ. ಸುರತ್ಕಲ್ ಟೋಲ್‌ಗೇಟ್ ಹೆಜಮಾಡಿ ಟೋಲ್‌ಗೇಟ್‌ಗೆ ಮರ್ಜ್ ಆಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನಾವು ಹಲವು ಸಮಯದಿಂದ ಟೋಲ್ ಗೇಟ್ ಮುಚ್ಚುವ ಪ್ರಯತ್ನದಲ್ಲಿದ್ದೆವು. ಈಗ ಟೋಲ್ ಬಂದ್ ಆದೇಶ ಬಂದಿದೆ. ಮುಂದೆ ಜಿಲ್ಲಾಧಿಕಾರಿಗಳಿಗೆ ಆರ್ಡರ್ ತಲುಪಿ ಅವರು ನೋಟಿಫಿಕೇಶನ್ ಹೊರಡಿಸುತ್ತಾರೆ. ಅವರ ನೋಟಿಫಿಕೇಶನ್ ಬಳಿಕ ಕೆಲವೇ ದಿನಗಳಲ್ಲಿ ಸುರತ್ಕಲ್ ಟೋಲ್ ಗೇಟ್ ಬಂದ್ ಆಗುತ್ತದೆ ಎಂದು ಹೇಳಿದ್ದಾರೆ.
ಟೋಲ್‌ಗೇಟ್ ರದ್ದು ಮಾಡಿರುವ ಬಗ್ಗೆ ಸ್ವತಃ ಸಂಸದರೆ ಟ್ವೀಟ್ ಮಾಡಿದ್ದಾರೆ. ಆದರೆ ಟೋಲ್ ವಿಲೀನ ಮಾಡಿರುವುದರಿಂದ ಪಕ್ಕದ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಹೆಚ್ಚುವರಿಯಾಗಿ ಎಷ್ಟು ಹಣ ಪಾವತಿ ಮಾಡಬೇಕಾಗುತ್ತದೆಯೇ ಎಂಬ ಆತಂಕ ವಾಹನ ಸವಾರರಲ್ಲಿದೆ. ಒಟ್ಟಿನಲ್ಲಿ ಊದುವುದನ್ನು ಕೊಟ್ಟು ಬಾರಿಸುವದನ್ನು ಖರೀದಿ ಮಾಡಿದಂತಹ ಸ್ಥಿತಿ ನಿರ್ಮಾಣವಾಗುತ್ತ ಎಂಬ ಸಂಶಯ ಮೂಡಿದೆ.
ವರದಿ: ಅಶೋಕ್, ಟಿವಿ 9 ಮಂಗಳೂರು
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ