ಬೆಂಗಳೂರು, ಜುಲೈ 19: ಕರ್ನಾಟಕದಾದ್ಯಂತ (Karnataka) ವಿವಿಧ ಕಾರಣಗಳಿಂದ ಇಂದು (ಜು.19) ಒಂದೇ ದಿನ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದ ಮನೆ ಕುಸಿದು ಬಿದ್ದು ಬಾಣಂತಿ ಮೃತಪಟ್ಟಿರುವ ಘಟನೆ ಮೈಸೂರು (Mysore) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಹೇಮಲತಾ (22) ಮೃತ ದುರ್ಧೈವಿ. ಮಗು ಬದುಕುಳಿದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಶಿಥಿಲಗೊಂಡಿತ್ತು.
ಹಾಸನ: ಹಾಸನದಲ್ಲಿ ಶಂಕಿತ ಡೆಂಘೀಗೆ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟಿದ್ದಾರೆ. ಹೊಳೆನರಸೀಪುರ ತಾಲ್ಲುಕಿನ ಹಳ್ಳೀ ಮೈಸೂರು ಹೋಬಳಿಯ ಗೋಹಳ್ಳಿ ಗ್ರಾಮದ ಕುಶಾಲ್ (22) ಮೃತ ವಿದ್ಯಾರ್ಥಿ. ಕುಶಾಲ್ ಕಳೆದ ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಸಾವಿಗೀಡಾಗಿದ್ದಾರೆ.
ಕುಶಾಲ್ ಹಾಸನದ ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದನು. ಕುಶಾಲ್ ತಾಯಿ ಕೂಡ ಡೆಂಗ್ಯೂನಿಂದ ಬಳಲುತ್ತಿದ್ದು, ಮಗ ಮೃತಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇಖಾ ಮತ್ತು ಮಂಜುನಾಥ್ ದಂಪತಿ ಎಂಬಿಬಿಎಸ್ ಕನಸು ಕಂಡಿದ್ದರು. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದರು. ಮಂಜುನಾಥ್ ಶಿಕ್ಷಕರಾಗಿದ್ದಾರೆ.
ದಾವಣಗೆರೆ: ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ. ಜಗಳೂರ ಪಟ್ಟಣದ ನಿವಾಸಿ ರೇಖಾ (19) ಮೃತ ದುರ್ದೈವಿ. ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರೇಖಾ ಕೊನೆ ಉಸಿರು ಎಳೆದಿದ್ದಾಳೆ.
ಇದನ್ನೂ ಓದಿ: ಕರ್ನಾಟಕದ ಯಾವೆಲ್ಲ ಹೆದ್ದಾರಿಗಳಲ್ಲಿ ಸಂಚಾರ ಬಂದ್? ಇಲ್ಲಿದೆ ವಿವರ
ನೆಲಮಂಗಲ: ಮಾನಸಿಕವಾಗಿ ನೊಂದ ಯೂಟ್ಯೂಬ್ ಚಾನಲ್ ವರದಿಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಧರ್ಮನಾಯಕನ ತಾಂಡ್ಯ ಗ್ರಾಮದ ಬಳಿ ನಡೆದಿದೆ. ದಾಸರಹಳ್ಳಿ ಯೂಟ್ಯೂಬ್ ಕನ್ನಡ ಟಿವಿ ವರದಿಗಾರ ಮಂಜುನಾಥ್ (40) ಮೃತ ದುರ್ದೈವಿ. ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಮಾನಸಿಕವಾಗಿ ನೊಂದಿರುವ ಬಗ್ಗೆ ಪೇಸ್ ಬುಕ್ ಲೈವ್ನಲ್ಲಿ ಹಂಚಿಕೊಂಡಿದ್ದರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಮೈಸೂರು ಹೊರ ವಲಯದ ರಿಂಗ್ ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ದಂಪತಿ ಮೃತಪಟ್ಟಿದ್ದಾರೆ. ಮೈಸೂರಿನ ಕೂರ್ಗಳ್ಳಿ ಗ್ರಾಮದ ನಿವಾಸಿಗಳಾದ ಚಂದ್ರು ಮತ್ತು ಪ್ರೇಮಾ ಮೃತ ದಂಪತಿ. ಸ್ಥಳಕ್ಕೆ ವಿವಿ ಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲೆ ನಡೆಸಿದರು. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವತಿ ಮೃತಪಟ್ಟಿದ್ದಾಳೆ. ಆಶ್ನಿ (21) ಮೃತ ದುರ್ದೈವಿ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರದಲ್ಲಿ ಭಾರಿ ಗಾಳಿ ಮಳೆಗೆ ವಿದ್ಯುತ್ ತಂತಿ ಗದ್ದೆಯಲ್ಲಿ ತುಂಡಾಗಿ ಬಿದ್ದಿತ್ತು. ತಂದೆಯ ಜತೆ ಗದ್ದೆಗೆ ಹೋಗಿದ್ದಾಗ ವಿದ್ಯುತ್ ತಂತಿ ಮೇಲೆ ತಿಳಿಯದೆ ಕಾಲಿಟ್ಟಿದ್ದಾಳೆ. ವಿದ್ಯುತ್ ಪ್ರವಹಿಸಿ ಆಶ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬೆಂಗಳೂರು: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 23 ವರ್ಷದ ಇಶಾನ್ ಮೃತ ದುರ್ದೈವಿ. ಗುರುವಾರ ಸಂಜೆ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಮಂಗಳೂರು: ಬಂಟ್ವಾಳದ ಪುಂಜಾಲಕಟ್ಟೆಯಲ್ಲಿ ಲಾರಿ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಫರಂಗಿಪೇಟೆ ನಿವಾಸಿ ಕಾರ್ತಿಕ್ ಮೃತ ದುರ್ದೈವಿ. ಶಾಮಿಯಾನದ ಸಾಮಾಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ಬಂಟ್ವಾಳದ ವಗ್ಗದಿಂದ ಬೆಳ್ತಂಗಡಿ ಕಡೆ ತೆರಳುತ್ತಿತ್ತು. ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಲಾರಿಯಲ್ಲಿ ಒಟ್ಟು ಹತ್ತು ಮಂದಿಯಿದ್ದರು ಎಂಬ ಮಾಹಿತಿ ದೊರೆತಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಕೊಪ್ಪಳ: ರೈಲ್ವೆ ಹಳಿ ಮೇಲೆ ಮದ್ಯ ಸೇವನೆ ಮಾಡಿ ಮಲಗಿದ್ದವರ ಮೇಲೆ ರೈಲು ಹರಿದಿದ್ದರಿಂದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗಂಗಾವತಿ ನಗರದ ಹೊರವಲಯದಲ್ಲಿ ನಡೆದಿದೆ.ಘಟನೆಯಲ್ಲಿ ಗಂಗಾವತಿ ನಗರದ ನಿವಾಸಿಗಳಾದ ಮೌನೇಶ್ ಪತ್ತಾರ (23), ಸುನೀಲ್ (23), ವೆಂಕಟ್ ಭೀಮನಾಯ್ಕ (20) ಮೃತ ಯುವಕರು.
ಅಪರಿಚಿತ ವಾಹನ ಡಿಕ್ಕಿಯಾಗಿ ಕರ್ತವ್ಯನಿರತ ಎಎಸ್ಐ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಒಣಬಳ್ಳಾರಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣೆ ಎಎಸ್ಐ ರಾಮಣ್ಣ (55) ಮೃತ ದುರ್ದೈವಿ.
ಹಾವೇರಿ: ಮಳೆಯಿಂದ ಮನೆ ಗೋಡೆ ಕುಸಿದು ಮೂವರು ಮೃತಪಟ್ಟಿರುವ ಘಟನೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ ಚೆನ್ನಮ್ಮ (30), ಅಮೂಲ್ಯ (3), ಅನನ್ಯಾ (6) ಮೃತ ದುರ್ದೈವಿಗಳು. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ