ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ

| Updated By: ಗಣಪತಿ ಶರ್ಮ

Updated on: Sep 01, 2023 | 10:29 PM

Maratha reservation Protest; ಕಲ್ಲು ತೂರಾಟ ಬಳಿಕ ಮಹಾರಾಷ್ಟ್ರ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ಬಳಿಕ ಜಾಲ್ನಾ ಜಿಲ್ಲೆಯ ವಡಿಗೋದ್ರಿ ಬಳಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್, ಮಹಾರಾಷ್ಟ್ರ ಸಾರಿಗೆ ಬಸ್ ಸೇರಿ ಆರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ
ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ
Follow us on

ಚಿಕ್ಕೋಡಿ, ಸೆಪ್ಟೆಂಬರ್ 1: ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ (Maratha reservation Protest) ಕರ್ನಾಟಕ ಸಾರಿಗೆ ಬಸ್‌ಗೆ (KSRTC Bus) ಬೆಂಕಿ ಹಚ್ಚಲಾಗಿದೆ. ಔರಂಗಾಬಾದ್ – ಹುಬ್ಬಳ್ಳಿ ಮಾರ್ಗದ ಕರ್ನಾಟಕ ಸಾರಿಗೆ ಬಸ್‌ಗೆ ಮಹಾರಾಷ್ಟ್ರದ (Maharashtra) ಜಾಲ್ನಾ ಜಿಲ್ಲೆಯ ಅಂಬಡ್ ತಾಲೂಕಿನ ವಡಿಗೋದ್ರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿಹಚ್ಚಲಾಗಿದೆ. ಮರಾಠಾ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಅದರ ಬಿಸಿ ಕರ್ನಾಟಕ ಸಾರಿಗೆ ಬಸ್​​ಗೆ ತಟ್ಟಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಜಾಲ್ನಾ ಜಿಲ್ಲೆಯ ಶಹಾಗಡ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಶುಕ್ರವಾರ ಪೊಲೀಸರು ತೆರಳಿದ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ಬಳಿಕ ಮಹಾರಾಷ್ಟ್ರ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ಬಳಿಕ ಜಾಲ್ನಾ ಜಿಲ್ಲೆಯ ವಡಿಗೋದ್ರಿ ಬಳಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್, ಮಹಾರಾಷ್ಟ್ರ ಸಾರಿಗೆ ಬಸ್ ಸೇರಿ ಆರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್​​ನಲ್ಲಿ 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ನಾಳೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲಿರುವ ಸಿಎಂ ಸಿದ್ದರಾಮಯ್ಯ: ಮಧುವಣಗಿತ್ತಿಯಂತೆ ಶೃಂಗಾರಗೊಂಡ ಆಲಮಟ್ಟಿ

200-300 ಜನ ಉದ್ರಿಕ್ತರಿಂದ ಏಕಾಏಕಿ ದಾಳಿ; ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ

ಘಟನೆಯ ಭೀಕರತೆಯ ಬಗ್ಗೆ ಬೆಳಗಾವಿ ಜಿಲ್ಲೆ ರಾಮದುರ್ಗ ಮೂಲದ ಬಸ್ ಚಾಲಕ ಎಲ್​​ಎಲ್ ಲಮಾಣಿ ಪ್ರತಿಕ್ರಿಯಿಸಿದ್ದಾರೆ. ಔರಂಗಾಬಾದ್​ನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದೆವು. ಲಾತೂರ್‌ ಬಸ್ ಮುಂದೆ ಹೋಗುತ್ತಿತ್ತು ನಾವು ಹಿಂದೆ ಇದ್ವಿ. ಲಾತೂರ್ ಬಸ್‌ಗೆ ಕಲ್ಲು ತೂರಾಟ ನಡೆಸಿ ಬಸ್ ಗಾಜು ಒಡೆದರು. ಬಳಿಕ ಹಿಂಬದಿಯಲ್ಲಿ ಇದ್ದ ನಮ್ಮ ಬಸ್ ಮೇಲೂ ದಾಳಿ ಮಾಡಿದ್ರು. ಬಸ್‌ನ ಹೆಡ್‌ಲೈಟ್, ಗಾಜುಗಳನ್ನು ಪುಡಿ ಪುಡಿ ಮಾಡಿದರು. ಕೆಳಗೆ ಇಳಿಯಿರಿ ಇಲ್ಲ ಬೆಂಕಿ ಹಚ್ಚುತ್ತೇವೆ ಅಂತಾ ಹೇಳಿದ್ರು. ಇಳಿದ ತಕ್ಷಣವೇ ಬಸ್‌ಗೆ ಬೆಂಕಿ ಹಚ್ಚಿದ್ರು. 200 ರಿಂದ 300 ಜನ ಉದ್ರಿಕ್ತರು ಏಕಾಏಕಿ ದಾಳಿ ಮಾಡಿದ್ರು. ನಮ್ಮ ಬಸ್‌ನಲ್ಲಿ 45ರಿಂದ 50 ಪ್ರಯಾಣಿಕರು ಇದ್ರು ಎಂದು ವಡಿಗೋದ್ರಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಲಮಾಣಿ ತಿಳಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Fri, 1 September 23