ರಾಮನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಾರ್ಖಾನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಶಕ್ತಿ ಅಕ್ಯುಮಲೇಟರ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಕಾರ್ಖಾನೆಯಲ್ಲಿ UPS ಬ್ಯಾಟರಿಗಳನ್ನ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿ ಸದ್ಯ, ಫ್ಯಾಕ್ಟರಿಯಲ್ಲಿ ಒಂದೊಂದೇ ಬ್ಯಾಟರಿ ಸ್ಫೋಟಗೊಳ್ಳುತ್ತಿವೆ ಎಂದು ಹೇಳಲಾಗಿದೆ. ಹಾಗಾಗಿ, ಅಕ್ಕ ಪಕ್ಕದ ಕಾರ್ಖಾನೆಗಳಿಗೂ ಬೆಂಕಿ ವ್ಯಾಪಿಸುತ್ತಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಮಿಕರು ಕಾರ್ಖಾನೆಯಿಂದ ಹೊರ ಬಂದಿದ್ದಾರೆ. ಹೀಗಾಗಿ, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ. ಈ ನಡುವೆ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.ಘಟನೆ ನಡೆದ ವೇಳೆ 80 ಕಾರ್ಮಿಕರು ಕೆಲಸ ಮಾಡ್ತಿದ್ದರು. ಅವಘಡ ಸಂಭವಿಸಿದ ಕೂಡಲೇ ಕಾರ್ಮಿಕರು ಹೊರಬಂದರು.
ಜೊತೆಗೆ, ಕಾರ್ಖಾನೆ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದೆ. ಕಾರ್ಖಾನೆಯಲ್ಲಿ ಌಸಿಡ್ ಇರುವ ಹಿನ್ನೆಲೆಯಲ್ಲಿ ಇದೀಗ ಮತ್ತಷ್ಟು ಆತಂಕ ಹೆಚ್ಚಿದೆ. ಇದೀಗ, ಪಕ್ಕದಲ್ಲಿದ್ದ ಮೆಡಿಸಿನ್ ತಯಾರಿಕಾ ಕಾರ್ಖಾನೆಗೂ ಬೆಂಕಿ ತಗುಲಿದೆ ಎಂದು ತಿಳಿದುಬಂದಿದೆ. ಆದರೆ, ಮೆಡಿಸಿನ್ ಕಾರ್ಖಾನೆ ಪಕ್ಕದಲ್ಲೇ ಆಯಿಲ್ ಫ್ಯಾಕ್ಟರಿ ಒಂದು ಇರುವುದರಿಂದ ಅಲ್ಲಿಗೆ ಬೆಂಕಿ ವ್ಯಾಪಿಸಿದರೆ ಗತಿಯೇನು ಎಂದು ಆತಂಕ ಹೆಚ್ಚಾಗಿದೆ.
ಈ ಕುರಿತು ಟಿವಿ 9ಗೆ ಕಾರ್ಖಾನೆ ಮಾಲೀಕ ನಾಗರಾಜ್ ಮಾತನಾಡಿದ್ದು ಇಂದು ಸಂಜೆ 5 ಗಂಟೆ ವೇಳೆಗೆ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಎಲ್ಲಾ ಕಾರ್ಮಿಕರು ಪಾರಾಗಿದ್ದಾರೆ. ಕೋಟ್ಯಂತರ ಮೌಲ್ಯದ ಬ್ಯಾಟರಿ ಉತ್ಪನ್ನಗಳಿದ್ದವು. ಸದ್ಯದ ಮಟ್ಟಿಗೆ ನಷ್ಟವನ್ನು ಅಂದಾಜಿಸುವುದು ಕಷ್ಟ. ನಷ್ಟದ ಅಂದಾಜು ಬಗ್ಗೆ ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.
ಜ್ಯೂಸ್ ಕುಡಿದು ಅಸ್ವಸ್ಥಗೊಂಡ ಮಕ್ಕಳು ಸಾವು: ತಾಯಿಯೇ ಕಂದಮ್ಮಗಳಿಗೆ ವಿಷ ಉಣಿಸಿದಳಾ?
Published On - 7:04 pm, Tue, 5 January 21