ಲಾಕ್​ಡೌನ್​ ನಂತರ ಗೋಪಾಲಕರಿಗೆ ಗುಡ್​ ನ್ಯೂಸ್​: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹಾಲಿನ ದರ ಹೆಚ್ಚಳ

|

Updated on: Jan 30, 2021 | 1:46 PM

24 ರೂಪಾಯಿ ಇದ್ದ ಹಾಲಿಗೆ 2 ರೂಪಾಯಿಯನ್ನ ಕೋಲಾರ ಹಾಲು ಒಕ್ಕೂಟ ಹೆಚ್ಚಳ ಮಾಡಿದ್ದು, ಸರ್ಕಾರದ 5 ರೂಪಾಯಿ ಪ್ರೋತ್ಸಾಹ ಧನ ಸೇರಿ ಕೋಲಾರ ಜಿಲ್ಲೆಯ ಗೋಪಾಲಕರಿಗೆ ಲೀಟರ್ ಹಾಲಿಗೆ 31 ರೂಪಾಯಿ ಸಿಗುತ್ತಿದೆ.

ಲಾಕ್​ಡೌನ್​ ನಂತರ ಗೋಪಾಲಕರಿಗೆ ಗುಡ್​ ನ್ಯೂಸ್​: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹಾಲಿನ ದರ ಹೆಚ್ಚಳ
ಹಳ್ಳಿಗಳಲ್ಲಿ ಹಾಲು ಕರೆಯುತ್ತಿರುವ ಚಿತ್ರಣ
Follow us on

ಕೋಲಾರ: ಈ ಜಿಲ್ಲೆಯಲ್ಲಿ ನೀರಿಗೆ ಬರವಿರಬಹುದು ಆದರೆ ಹಾಲಿಗೆ ಮಾತ್ರ ಯಾವುದೇ ಬರವಿಲ್ಲ! ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ಹಾಲು ಒಕ್ಕೂಟ ಹಾಲು ಬೆಲೆ ಕಡಿಮೆ ಮಾಡಿದರೂ ಕುಗ್ಗದೆ ಹಾಲು ಉತ್ಪಾದನೆ ಮಾಡಿದ್ದ ಈ ಭಾಗದ ಗೋಪಾಲಕರಿಗೆ ಜಿಲ್ಲೆಯ ಹಾಲು ಒಕ್ಕೂಟ ಈಗ ಗುಡ್​ ನ್ಯೂಸ್​ ಕೊಟ್ಟಿದೆ.

ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹಾಲಿನ ದರ ಹೆಚ್ಚಳ:
ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಮೊದಲು ಹೈನುಗಾರಿಕೆ ಒಂದು ಉಪ ಕಸುಬಾಗಿ ಆರಂಭವಾಗಿದ್ದು, ಇಂದಿಗೆ ಇದೊಂದು ದೊಡ್ಡ ಉದ್ದಿಮೆಯಾಗಿದೆ. ಸಾವಿರಾರು ಕುಟುಂಬಗಳಿಗೆ ಹೈನುಗಾರಿಕೆಯೇ ಜೀವನಾಡಿಯಾಗಿದ್ದು, ಪರಿಣಾಮ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗೂ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ.

ಎರಡೂ ಜಿಲ್ಲೆಯಲ್ಲಿ 1840 ಹಾಲು ಉತ್ಪಾದಕ ಸಂಘಗಳಿದ್ದು 2.83 ಲಕ್ಷ ಹಾಲು ಉತ್ಪಾದಕ ಸಂಘದ ಸದಸ್ಯರುಗಳಿದ್ದಾರೆ. ಪ್ರತಿನಿತ್ಯ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸರಾಸರಿ 9 ಲಕ್ಷ ಲೀಟರ್​ ಹಾಲು ಉತ್ಪಾದನೆ ಮಾಡುತ್ತಿದೆ. ಕೊರೊನಾ ಲಾಕ್​ ಡೌನ್​ ಸಂದರ್ಭದಲ್ಲಿ ತೀರಾ ಸಂಷ್ಟಕ್ಕೆ ಸಿಲುಕಿದ್ದ ಕೋಲಾರ ಹಾಲು ಒಕ್ಕೂಟ ರಾಜ್ಯದಾದ್ಯಂತ ಹಾಲು ಒಕ್ಕೂಟ ಕೂಡ ಎರಡು ರೂಪಾಯಿ ಹಾಲಿನ ದರ ಕಡಿಮೆ ಮಾಡಿತ್ತು. ಲಾಕ್​ ಡೌನ್ ನಂತರದಲ್ಲಿ ಸದ್ಯ ಸುಧಾರಿಸಿಕೊಂಡಿರುವ ಕೋಲಾರ ಹಾಲು ಒಕ್ಕೂಟ ರೈತರಿಗೆ ಹಾಲಿನ ಖರೀದಿ ದರವನ್ನು ಹೆಚ್ಚಿಸಿದೆ.

ಕೋಲಾರ ,ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಕಚೇರಿ ಚಿತ್ರಣ

ಸದ್ಯ 24 ರೂಪಾಯಿ ಇದ್ದ ಹಾಲಿಗೆ 2 ರೂಪಾಯಿಯನ್ನ ಕೋಲಾರ ಹಾಲು ಒಕ್ಕೂಟ ಹೆಚ್ಚಳ ಮಾಡಿದ್ದು, ಸರ್ಕಾರದ 5 ರೂಪಾಯಿ ಪ್ರೋತ್ಸಾಹ ಧನ ಸೇರಿ ಕೋಲಾರ ಜಿಲ್ಲೆಯ ಗೋಪಾಲಕರಿಗೆ ಲೀಟರ್ ಹಾಲಿಗೆ 31 ರೂಪಾಯಿ ಸಿಗುತ್ತಿದೆ. ಸದ್ಯ ಲಾಕ್​ಡೌನ್​ ನಂತರ ರೈತರಿಗೆ ನಾವು ಕೊಡುತ್ತಿರುವುದು ಶುಭಸುದ್ದಿ ಎನ್ನುವುದು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ

ಲಾಕ್​ಡೌನ್​ ಸಂದರ್ಭದಲ್ಲಿ ಹಾಲು ಖರೀದಿ ದರ ಇಳಿಕೆ!
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಲಾಕ್​ಡೌನ್​ ಸಂದರ್ಭದಲ್ಲಿ ಹಾಲಿನ ಮಾರಾಟವಿಲ್ಲದೆ ತೀರಾ ನಷ್ಟ ಅನುಭವಿಸಿತ್ತು ಪರಿಣಾಮ ಬೇರೆ ದಾರಿ ಇಲ್ಲದೆ ರೈತರಿಂದ ಹಾಲಿನ ಖರೀದಿ ದರವನ್ನು 2 ರೂಪಾಯಿ ಇಳಿಕೆ ಮಾಡಲಾಗಿತ್ತು. ಈ ವೇಳೆ ಗೋಪಾಲಕರಿಗೂ ಗಾಯದ ಮೇಲೆ ಬರೆ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

ಹಾಲು ಸಾಕಾಣೆ ಮಾಡುತ್ತಿರುವುದು

ಹೈನುಗಾರಿಕೆ ಅಷ್ಟು ಸುಲಭದ ಕೆಲಸವಲ್ಲ:
ಕೋಲಾರದಂತ ಪ್ರದೇಶದಲ್ಲಿ ಹೈನುಗಾರಿಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕೇವಲ ಮಳೆಯಾಶ್ರಿತ ಪ್ರದೇಶವಾದ ಕೋಲಾರ ಜಿಲ್ಲೆಯಲ್ಲಿ ನೀರಿಗೆ ಅಭಾವ ಹೆಚ್ಚು ಹಾಗಾಗಿ ಹೈನುಗಾರಿಕೆ ಒಂದು ಸವಾಲೆ ಸರಿ. ಹೀಗಿದ್ದರೂ ಸವಾಲನ್ನು ಮೆಟ್ಟಿ ನಿಂತು ಹೈನೋಧ್ಯಮ ಮಾಡುತ್ತಿರುವ ಗೋಪಾಲಕರಿಗೆ ಹಾಲಿನ ಗುಣಮಟ್ಟ, ಎಸ್​ಎನ್​ಎಫ್​ ಕಾಪಾಡುವುದು, ಅಷ್ಟು ಸುಲಭದ ಮಾತಲ್ಲ. ಈ ಗುಣಮಟ್ಟ ಕಾಪಾಡಿದಾಗಲೇ ರೈತರಿಗೆ ಹಾಲಿಗೆ ಉತ್ತಮ ಬೆಲೆ ಸಿಗುವುದು.

ಹಾಲು ದರ ಏರಿಕೆ ಬೆನ್ನಲ್ಲೇ ಹೆಚ್ಚಾಗುತ್ತದೆ ಪಶು ಆಹಾರದ ಬೆಲೆ!
ಪ್ರತಿಬಾರಿ ಹಾಲು ಒಕ್ಕೂಟಗಳು ರೈತರಿಗೆ ಅನುಕೂಲವಾಗಲೆಂದು, ರೈತರು ಆರ್ಥಿಕವಾಗಿ ಸಬಲರಾಗಲೆಂದು ಹಾಲಿನ ದರವನ್ನು ಹೆಚ್ಚು ಮಾಡಿದರೆ, ಇದರ ಲಾಭ ಪಡೆಯುವವರು ಬೇರೆಯವರು. ಏಕೆಂದರೆ ಹಾಲು ದರ ಏರಿಕೆ ಮಾಡಿದ ಬೆನ್ನಲ್ಲೇ ಪಶು ಆಹಾರದ ದರವನ್ನು ಏರಿಕೆ ಮಾಡುವ ಮೂಲಕ ರೈತರ ಲಾಭವನ್ನು ಪಶು ಆಹಾರ ತಯಾರು ಮಾಡುವ ಕಂಪನಿಗಳು ತಿಂದು ಹಾಕುತ್ತಿವೆ.

ಸರ್ಕಾರಗಳು ರೈತರಿಗೆ ಹಾಲಿನ ದರ ಹೆಚ್ಚಿಗೆ ಮಾಡಿದರೆ ಸಾಲದು ಪಶು ಆಹಾರ ತಯಾರು ಮಾಡುವ ಕಂಪನಿಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಗೋಪಾಲಕ ಕೂತಂಡಳ್ಳಿ ನಾರಾಯಣಸ್ವಾಮಿ ಹೇಳಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ

ಒಟ್ಟಾರೆ ಹಾಲು ಉತ್ಪಾದಕರು ಹಾಲನ್ನು ಉತ್ಪಾದನೆ ಮಾಡಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿದೆ ಹೀಗಾಗಿ ಹಾಲು ಉತ್ಪಾದನೆ ಮಾಡುವ ಹಾಲು ಉತ್ಪಾದಕನು ಕೂಡ ಇಂದಿನ ಹಾಲು ಉತ್ಪಾದನೆ ತಮ್ಮ ಬೆವರನ್ನು ಬಸಿಯಬೇಕಿದೆ ಎನ್ನುವುದೇ ದುರಂತ.

ಅನ್ನಭಾಗ್ಯ ಆಯ್ತು.. ಈಗ ಮಕ್ಕಳ ಪಾಲಿನ ಕ್ಷೀರಭಾಗ್ಯಕ್ಕೂ ಕನ್ನ