ವಿವಾದದ ನಂತರ ಎಚ್ಚೆತ್ತು, ಮನೆಬಿಟ್ಟು ಆಸ್ಪತ್ರೆಯಲ್ಲೇ ಲಸಿಕೆ ಹಾಕಿಸಿಕೊಂಡ ಕೃಷಿ ಸಚಿವ ಬಿ ಸಿ ಪಾಟೀಲ್!

| Updated By: ಸಾಧು ಶ್ರೀನಾಥ್​

Updated on: Apr 02, 2021 | 3:19 PM

ವಿವಾದದ ಸುಳಿಯಲ್ಲಿ ಸಿಕ್ಕ ಬಳಿಕ ಎಚ್ಚೆತ್ತ ಸಚಿವ ಬಿ.ಸಿ. ಪಾಟೀಲ್ ಕೊರೊನಾದ ಎರಡನೇ ಡೋಸ್​ ಲಸಿಕೆಯನ್ನು ಮನೆಯಲ್ಲಿ ಪಡೆಯದೆ ಹಿರೇಕೆರೂರು ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದಿದ್ದಾರೆ.

ವಿವಾದದ ನಂತರ ಎಚ್ಚೆತ್ತು, ಮನೆಬಿಟ್ಟು ಆಸ್ಪತ್ರೆಯಲ್ಲೇ ಲಸಿಕೆ ಹಾಕಿಸಿಕೊಂಡ ಕೃಷಿ ಸಚಿವ ಬಿ ಸಿ ಪಾಟೀಲ್!
ಬಿ.ಸಿ.ಪಾಟೀಲ್
Follow us on

ಹಾವೇರಿ: ಮನೆಯಲ್ಲೇ ಕೊರೊನಾ ಲಸಿಕೆ ಪಡೆದು ವಿವಾದ ಮಾಡಿಕೊಂಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಎರಡನೇ ಡೋಸ್​ ಲಸಿಕೆಯನ್ನು ಆಸ್ಪತ್ರೆಗೆ ತೆರಳಿ ಪಡೆದಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾದ ಎರಡನೇ ಡೋಸ್​ ಲಸಿಕೆಯನ್ನು ಬಿ.ಸಿ.ಪಾಟೀಲ್ ಇಂದು ಪಡೆದಿದ್ದಾರೆ.

ಮಾರ್ಚ್ 2 ರಂದು ಬಿ.ಸಿ. ಪಾಟೀಲ್ ಮತ್ತು ಅವರ ಪತ್ನಿ ಆರೋಗ್ಯ ಸಿಬ್ಬಂದಿಯನ್ನು ತಮ್ಮ ಮನೆಗೆ ಕರೆಸಿಕೊಂಡು ಮನೆಯಲ್ಲೇ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಸಚಿವರ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ನರೇಂದ್ರ ಮೋದಿಯವರೇ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಸಚಿವನಾಗಿ ಬಿ.ಸಿ. ಪಾಟೀಲ್ ಆರೋಗ್ಯ ಸಿಬ್ಬಂದಿಯನ್ನು ಮನೆಗೆ ಕರೆಸಿ ಲಸಿಕೆ ಹಾಕಿಸಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಮಾತುಗಳು ತೂರಿ ಬಂದಿದ್ದವು.

ಇದೇ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾ ಆರ್‌ಸಿಹೆಚ್ ಡಾ.ಜಯಾನಂದ್‌ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ನೋಟಿಸ್ ಜಾರಿ ಮಾಡಿದ್ದರು. ನಿನ್ನೆಯಷ್ಟೇ ಹಿರೇಕೆರೂರು ಆರೋಗ್ಯಾಧಿಕಾರಿ (ಟಿಹೆಚ್ಒ) ಡಾ. ಝಡ್​. ಆರ್​. ಮಕಾಂದಾರ್ ಅವರನ್ನು ಅಮಾನತು ಮಾಡಿ ಆರೋಗ್ಯ, ಕುಟುಂಬ ಕಲ್ಯಾಣ‌ ಸೇವೆ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದರು.

ಈ ವಿವಾದ, ಬೆಳವಣಿಗೆಗಳ ಮಧ್ಯೆ, ಎಚ್ಚೆತ್ತ ಸಚಿವ ಬಿ.ಸಿ. ಪಾಟೀಲ್ ಕೊರೊನಾದ ಎರಡನೇ ಡೋಸ್​ ಲಸಿಕೆಯನ್ನು ಮನೆಯಲ್ಲಿ ಪಡೆಯದೆ ಹಿರೇಕೆರೂರು ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂದಂತೆ ವಿವಾದಕ್ಕೆ ಸಿಲುಕಿ ಎಚ್ಚೆತ್ತುಕೊಂಡಿದ್ದಾರೆ.

ಬಿ.ಸಿ.ಪಾಟೀಲ್

ಇದನ್ನೂ ಓದಿ: ಸಚಿವ ಬಿ.ಸಿ.ಪಾಟೀಲ್ ಮನೆಗೇ ಹೋಗಿ ಲಸಿಕೆ ನೀಡಿದ್ದಕ್ಕೆ ವೈದ್ಯಾಧಿಕಾರಿ ಮಕಾಂದಾರ್ ಸಸ್ಪೆಂಡ್

Minister BC Patil takes 2nd dose corona vaccine in haveri hospital