ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಮುಂದುವರಿದಿದೆ. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಲಾಪದಲ್ಲಿ ಪಾಲ್ಗೊಂಡಿಲ್ಲ. ಬೆಂಗಳೂರಿನ ಅಶೋಕನಗರದಲ್ಲಿ ಹಿರಿಯ ನಾಯಕ ಆಸ್ಕರ್ ಫರ್ನಾಡಿಂಸ್ ಅವರ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಹುಬ್ಬಳ್ಳಿಗೆ ತೆರಳಿದ್ದು ತಮ್ಮ ಬಾಲ್ಯ ಸ್ನೇಹಿತನ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದಾರೆ.
ಇತ್ತ ಹಿರಿಯ ನಾಯಕರ ಅನುಪಸ್ಥಿತಿಯಲ್ಲಿ ಹಿರಿಯ ಮನೆ ಕಲಾಪ (ವಿಧಾನ ಪರಿಷತ್) ನಡೆಯುತ್ತಿದೆ. ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರ ರೂಪವಾಗಿ ಸಚಿವ ಜೆಸಿ ಮಾಧುಸ್ವಾಮಿ ಅವರು ಸಿ.ಡಿ (CD) ನೀಡಿದಾಗ ಜೆಡಿಎಸ್ ಸದಸ್ಯ ಶ್ರೀಕಂಠೇ ಗೌಡ ಹಾಸ್ಯ ಚಟಾಕಿ ಹಾರಿಸಿದ್ದು, ಸದನ ನಗೆಗಡಲಲ್ಲಿ ತೇಲಿದೆ.
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡರು ತಾವು ಕೇಳಿದ್ದ ಪ್ರಶ್ನೆಗೆ ಉತ್ತರ ರೂಪವಾಗಿ ಸಂಬಂಧಪಟ್ಟ ಸಚಿವರ ಕಡೆಯಿಂದ CD ಬಂದಾಗ ಅದನ್ನು ನೋಡಿ ಗಾಬರಿಯಾಗಿದೆ ಎಂದು ಶ್ರೀಕಂಠೇ ಗೌಡರು ಹೇಳಿದರು. CD ನೋಡಿ ನನಗೆ ಗಾಬರಿಯಾಗಿದೆ ಎಂದ ಶ್ರೀಕಂಠೇಗೌಡ, ಸಚಿವರು ನೀಡಿದ CDಯನ್ನು ಸದನಕ್ಕೆ ಎತ್ತಿ ತೋರಿಸಿದರು. ಏನ್ರಿ ಇದೆಲ್ಲ ಸುಮ್ನಿರಿ ಎಂದು ಸಭಾಪತಿ ಹೊರಟ್ಟಿ ನಗೆಯಾಡುತ್ತಲೇ ಪ್ರತಿಕ್ರಿಯಿಸಿದರು.
ಆದರೆ ಅದಕ್ಕೆ ಖಡಕ್ ಉತ್ತರ ನೀಡಿದ ಸಚಿವ ಜೆಸಿ ಮಾಧುಸ್ವಾಮಿ ಅವರು ಅಷ್ಟೊಂದು ಮಾಹಿತಿ ಕೇಳಿದಾಗ CDಯನ್ನೂ ಕೊಡಬೇಕಾಗುತ್ತೆ, ಎನ್ ಸೈಕ್ಲೋಪಿಡಿಯಾನೂ ಕೊಡಬೇಕಾಗುತ್ತದೆ ಎಂದು ಸಭಾಪತಿ ಮತ್ತು ಶ್ರೀಕಂಠೇಗೌಡಗೆ ತಿಳಿಸಿದರು. ಆಗ ಅದು ಯಾವ ಸಿಡಿಯೋ ಅಂತಾ ಗಾಬರಿ ಬಿದ್ದೋದೆ ನಾನು ಎಂದು ಶ್ರೀಕಂಠೇಗೌಡ ಸೇರಿಸಿದರು.
ಈ ಹಂತದಲ್ಲಿ, ನಾವು ಮಾಹಿತಿ ಕೊಟ್ಟರೂ ವ್ಯಂಗ್ಯ ಮಾಡುತ್ತಾರೆ; ಕೊಡದಿದ್ದರೂ ವ್ಯಂಗ್ಯ ಮಾಡುತ್ತಾರೆಂದು ಮಾಧುಸ್ವಾಮಿ ಹುಸಿನಗೆಯೊಂದಿಗೆ ಹೇಳಿದರು.
(minister jc madhu swamy gives answer to jds member in the form of cd in karnataka legislature house)
Published On - 12:55 pm, Thu, 16 September 21