ಅಪೌಷ್ಟಿಕತೆ ಸಮಸ್ಯೆ: ಕಲ್ಯಾಣ ಕರ್ನಾಟಕದ ಮಕ್ಕಳಿಗೆ ರಾಮಬಾಣವಾದ ಕೊಪ್ಪಳದ ನುಗ್ಗೆ ಪುಡಿ

|

Updated on: Dec 14, 2020 | 4:35 PM

ಗಂಗಾವತಿ ತಾಲೂಕಿನಲ್ಲಿ ಆಯ್ದ 100 ಮಕ್ಕಳಿಗೆ ಪ್ರಾಯೋಗಿಕವಾಗಿ ನುಗ್ಗೆ ಪುಡಿ ಮಿಶ್ರಿತ ಆಹಾರ ವಿತರಿಸಲಾಗಿತ್ತು. ಉತ್ತಮ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಈ ಯೋಜನೆ ಜಿಲ್ಲೆಯಾದ್ಯಂತ ಮೂರು ತಿಂಗಳವರೆಗೆ ವಿಸ್ತರಿಸಲು ತೀರ್ಮಾನಿಸಿದೆ.

ಅಪೌಷ್ಟಿಕತೆ ಸಮಸ್ಯೆ: ಕಲ್ಯಾಣ ಕರ್ನಾಟಕದ ಮಕ್ಕಳಿಗೆ ರಾಮಬಾಣವಾದ ಕೊಪ್ಪಳದ ನುಗ್ಗೆ ಪುಡಿ
ನುಗ್ಗೆ ಪುಡಿಯ ವಿಶೇಷತೆ ಕುರಿತು ತಿಳಿಸುತ್ತಿರುವ ಜಿಲ್ಲಾಡಳಿತ
Follow us on

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಅನ್ನೋದು ಮಕ್ಕಳನ್ನ ಬೆಂಬಿಡದೆ ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಕೊಪ್ಪಳ ಜಿಲ್ಲಾಡಳಿತ ಅಪೌಷ್ಟಿಕತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ನುಗ್ಗೆ ಪುಡಿಯನ್ನು ಆ ಭಾಗದ ಮಕ್ಕಳಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಆಯ್ದ 100 ಮಕ್ಕಳಿಗೆ ನುಗ್ಗೆ ಪುಡಿ ನೀಡಲಾಗಿತ್ತು. ಸದ್ಯ ಇದೀಗ ಈ ಯೋಜನೆ ಯಶಸ್ವಿಯಾಗಿದ್ದು, ಜಿಲ್ಲೆಯಾದ್ಯಂತ ಅಪೌಷ್ಟಿಕತೆ ಇಂದ ಬಳಲೋ ಮಕ್ಕಳಿಗೆ ನುಗ್ಗೆ ಪುಡಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ನುಗ್ಗೆ ಪುಡಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ

ಅಪೌಷ್ಟಿಕತೆ ನಿವಾರಿಸುವಲ್ಲಿ ಅಂಗನವಾಡಿ ಮಕ್ಕಳಿಗೆ ಪ್ರಾಯೋಗಿಕವಾಗಿ ನುಗ್ಗೆ ಪುಡಿ ಬಳಸಲಾಗಿದ್ದು, ಫಲಿತಾಂಶ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಕ್ಕಳಿಗೆ ನುಗ್ಗೆ ಪುಡಿ ವಿತರಿಸಲು ತೀರ್ಮಾನಿಸಿದೆ. ಜಿಲ್ಲೆಯಲ್ಲಿ 1,850 ಅಂಗನವಾಡಿ ಕೇಂದ್ರಗಳಿದ್ದು, ಸುಮಾರು 1.50 ಲಕ್ಷಕ್ಕೂ ಅಧಿಕ ಮಕ್ಕಳು ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 788, ಸಾಧಾರಣ ಅಪೌಷ್ಟಿಕತೆಯ 33,268 ಸೇರಿದಂತೆ 34,416 ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ನುಗ್ಗೆ ಪುಡಿ

ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಮೊಟ್ಟೆ, ಹಾಲು, ನಾನಾ ನಮೂನೆಯ ಕಾಳು ಸೇರಿದಂತೆ ಪೌಷ್ಟಿಕ ಅಂಶವುಳ್ಳ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆದರೂ ಅಪೌಷ್ಟಿಕತೆ ತೀವ್ರಗತಿಯಲ್ಲಿ ಕಡಿಮೆ ಆಗುತ್ತಿಲ್ಲ. ಅಪೌಷ್ಟಿಕತೆ ಹೊಂದುತ್ತಿರುವ ಮಕ್ಕಳ ಸಂಖ್ಯೆಗಳಲ್ಲಿ ಪ್ರತಿ ತಿಂಗಳು ಏರಿಳಿತ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಅಪೌಷ್ಟಿಕತೆ ನಿವಾರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ತೀರ್ಮಾನಿಸಿದ್ದಾರೆ.

ನುಗ್ಗೆ ಪುಡಿ ತಯಾರಿಕೆ

ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಗಂಗಾವತಿ ತಾಲೂಕಿನ 100 ಮಕ್ಕಳಿಗೆ ನುಗ್ಗೆ ಪುಡಿ ಪೂರೈಸಿ ಅಪೌಷ್ಟಿಕತೆ ಕಡಿಮೆಗೊಳಿಸಲು ತೀರ್ಮಾನಿಸಿದ್ದರು. ಅಪೌಷ್ಟಿಕತೆಯಿಂದ ಬಳಲುತ್ತಿರುವ 100 ಮಕ್ಕಳನ್ನು ಆಯ್ಕೆ ಮಾಡಿ ನುಗ್ಗೆ ಪುಡಿ ನಿಗದಿತ ಪ್ರಮಾಣದಲ್ಲಿ ಆಹಾರ ಪದಾರ್ಥ ಜತೆಗೆ ವಿತರಿಸಲಾಗಿದೆ. ಆರಂಭದಲ್ಲಿ ಕೆಲ ಮಕ್ಕಳಲ್ಲಿ ಬೇಧಿ ಶುರುವಾಗಿತ್ತಾದರೂ ಕೆಲ ದಿನಗಳ ಬಳಿಕ ಪರಿಣಾಮ ಪರಿಶೀಲಿಸಲಾಗಿದ್ದು, ಫಲಿತಾಂಶ ಉತ್ತಮವಾಗಿ ಬಂದಿದೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳು ಪೌಷ್ಟಿಕತೆ ಪಡೆದಿದ್ದು, ಆರೋಗ್ಯಯುತರಾಗಿದ್ದಾರೆ.

ಬಾಟಲಿಗಳಲ್ಲಿ ನುಗ್ಗೆ ಪುಡಿ ಲಭ್ಯವಿದೆ.

ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉಳಿದ ತಾಲೂಕುಗಳಾದ ಕೊಪ್ಪಳ, ಗಂಗಾವತಿ, ಕನಕಗಿರಿ, ಕಾರಟಗಿ, ಕುಷ್ಟಗಿ, ಕುಕನೂರು, ಯಲಬುರ್ಗಾ ತಾಲೂಕಿನ ಅಂಗನವಾಡಿ ಕೇಂದ್ರಗಳ ಎಲ್ಲ ಮಕ್ಕಳಿಗೆ ನುಗ್ಗೆ ಪುಡಿ ವಿತರಿಸಲು ತೀರ್ಮಾನಿಸಿದೆ.

ಅಂಗನವಾಡಿ ಕೇಂದ್ರಗಳಿಗೆ ಸರಬರಾಜುಗೊಳಿಸುವ ಆಹಾರ ಪದಾರ್ಥಗಳಲ್ಲಿ ನುಗ್ಗೆ ಪುಡಿ ಮಿಶ್ರಣ ಮಾಡಿ ಪೂರೈಸುತ್ತಿದ್ದು, ಜಿಲ್ಲೆಯ ಸುಮಾರು 1.50 ಲಕ್ಷಕ್ಕೂ ಅಧಿಕ ಮಕ್ಕಳು ನುಗ್ಗೆ ಪುಡಿ ಸೇವಿಸುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ಪ್ರತಿ ದಿನ 75 ಗ್ರಾಂ ಹಾಗೂ ಗರ್ಭಿಣಿಯರಿಗೆ 1.50 ಗ್ರಾಂ ನುಗ್ಗೆ ಪುಡಿ ಮಿಶ್ರಣ ಮಾಡಿ ಆಹಾರದ ಜತೆಗೆ ನೀಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಆರಂಭಿಕ ಹಂತದಲ್ಲಿಯೇ ಗಂಗಾವತಿ ತಾಲೂಕು ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಯೋಜನೆ ಮೂರು ತಿಂಗಳವರೆಗೆ ಪ್ರಾಯೋಗಿಕವಾಗಿ ಅನುಷ್ಟಾನದಲ್ಲಿಡಾಗುವುದು ನಂತರದಲ್ಲಿ ಜಿಲ್ಲೆಯಲ್ಲೂ ಯಶಸ್ವಿಯಾದರೆ ಮುಂಬರುವ ದಿನದಲ್ಲಿ ನಿರಂತರವಾಗಿ ಪೂರೈಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ತೀರ್ಮಾನಿಸಿದ್ದಾರೆ.
ಶಿವಕುಮಾರ್ ಪತ್ತಾರ್

ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ತಯಾರಾಗ್ತಿದೆ ವಿಶೇಷ ಚಾಕೋಲೇಟ್!

Published On - 4:58 pm, Sat, 12 December 20