ಬೆಂಗಳೂರು: ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಪಟ್ಟು ಹಿಡಿದು ಸಾರಿಗೆ ನಿಗಮ ಮಂಡಳಿ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಮಧ್ಯೆ, ಸಾರಿಗೆ ನೌಕರರಿಗೆ ಮಾತುಕತೆ ನಡೆಸಲು ಮಧ್ಯರಾತ್ರಿಯವರೆಗೂ ಕಾಲಾವಕಾಶ ಇದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಒಂದೊಮ್ಮೆ ಇದು ಸಾಧ್ಯವಾಗದಿದ್ದರೆ, ನಾಳೆಯಿಂದ ಖಾಸಗಿ ವಾಹನ ಬಳಸಿ ಸಂಚಾರಕ್ಕೆ ಅನುವು ಮಾಡಿಕೊಡಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಲಕ್ಷ್ಮಣ ಸವದಿ, ನಾನು ಅಧಿಕಾರಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ನಾಳೆಯಿಂದ ಖಾಸಗಿ ವಾಹನಗಳನ್ನು ಸರ್ಕಾರಿ ದರದಲ್ಲೇ ಓಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳೋದು ನಮ್ಮ ಕರ್ತವ್ಯ. ನಾನು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಯೂ ಮಾತನಾಡಿದ್ದೇನೆ ಎಂದರು.
ಬೇಡಿಕೆ ವಿಚಾರವಾಗಿ ನೌಕರರಿಗೆ ಬಂದು ಮಾತನಾಡಲು ಕೋರಿದ್ದೇನೆ. ಆದರೆ, ಯಾರೊಬ್ಬರೂ ಬಂದು ಮಾತನಾಡುತ್ತಿಲ್ಲ. ನಿಮ್ಮ ಬೇಡಿಕೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ನಾವು ಹೇಳಿದ್ದೇವೆ. ರಾತ್ರಿ 12 ಗಂಟೆಯವರೆಗೂ ನೌಕರರಿಗಾಗಿ ಮನೆಯಲ್ಲಿ ಕಾಯುತ್ತೇನೆ ಎಂದರು.
ನಾನು ಈಗಲೂ ನೌಕರರಿಗೆ ಮನವಿ ಮಾಡಿಕೊಳ್ಳುತ್ತೇನೆ. ನೀವು ನಮ್ಮ ಕುಟುಂಬದವರಿದ್ದಂತೆ. ಇಬ್ಬರೂ ಕೂತು ಮಾತುಕತೆ ಮಾಡಬೇಕು. ನಾವು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆದರೆ, ಈ ರೀತಿ ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡೋದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಬಂದು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕೋರಿದರು.
37 ಬಸ್ಗಳಿಗೆ ಕಲ್ಲು ತೂರಾಟ:
ಇಂದು ಮುಷ್ಕರದ ವೇಳೆ ಬಸ್ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ಈ ವರೆಗೆ 37 ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.
Published On - 5:08 pm, Sat, 12 December 20