ರಾಯಚೂರು, ನವೆಂಬರ್ 14: ಗಡಿ ಜಿಲ್ಲೆ ರಾಯಚೂರಿನಲ್ಲಿ ವಾಲ್ಮೀಕಿ ಭವನದ (Valmiki Bhavan) ಮೇಲೆಯೇ ಮಸೀದಿ ನಿರ್ಮಾಣ ಮಾಡಿರುವ ವಿವಾದ ಪ್ರಕರಣ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಅನ್ಯಕೋಮಿನ ಜನ ಅಕ್ರಮ ಕಟ್ಟಡ ಕಟ್ಟಿರುವ ಆರೋಪದ ಬಗ್ಗೆ ಅಧಿಕಾರಿಗಳು ಗ್ರಾಮ ಸಭೆ ನಡೆಸಿದರೂ, ಪ್ರಕರಣ ಇತ್ಯರ್ಥವಾಗಿಲ್ಲ. ಈ ವೇಳೆ ಹೈಡ್ರಾಮೇ ನಡೆದುಹೋಗಿದೆ.
ರಾಯಚೂರಿನಲ್ಲಿ ವಾಲ್ಮೀಕಿ ಭವನದ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೋನವಾರ ಗ್ರಾಮದಲ್ಲಿರುವ ವಾಲ್ಮೀಕಿ ಭವನದ ಮೇಲೆ ಮಸೀದಿ ಕಟ್ಟಣ ನಿರ್ಮಾಣ ಮಾಡಲಾಗಿದೆ. ಗೋನವಾರ ಗ್ರಾಮದಲ್ಲಿರುವ ವಾಲ್ಮೀಕಿ ಭವನವನ್ನ 2014-25 ನೇ ಸಾಲಿನಲ್ಲಿ 4 ಲಕ್ಷ 98 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ಇದನ್ನೂ ಓದಿ: ರಾಯಚೂರು: 10 ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ 240 ಸಾವು, ಬೈಕ್ ಸವಾರರಿಗೆ ಇನ್ನಷ್ಟು ಕಠಿಣ ರೂಲ್ಸ್
ಆ ಬಳಿಕ ಆ ಭವನದ ಮೇಲೆ ಅನ್ಯಕೋಮಿನಿಂದ 2016-17 ರಲ್ಲಿ ಒಂದು ಕೊಠಡಿ ನಿರ್ಮಾಣ ಮಾಡಲಾಗಿತ್ತು. ಜನರ ಬಳಕೆಗೆ ಆ ಕೊಠಡಿ ಬಳಕೆ ಆಗತ್ತೆ ಅಂತ ವಾಲ್ಮೀಕಿ ಸಮುದಾಯದ ಜನರು ಸುಮ್ಮನಿದ್ದರು. ಕಾಲಕ್ರಮೇಣ ಅಲ್ಲಿ 2019ರಲ್ಲಿ ಆ ಕಟ್ಟಡದ ಮೇಲೆ ಗುಂಬಜ್ ನಿರ್ಮಿಸಿ ಆ ಕಟ್ಟಡದಲ್ಲಿ ಬೇರೆ ಕೋಮಿನ ಧಾರ್ಮಿಕ ಚಟುವಟಿಕೆಗಳನ್ನ ಶುರು ಮಾಡಲಾಗಿದೆಯಂತೆ. ಈ ಬಗ್ಗೆ ಸ್ಥಳೀಯ ವಾಲ್ಮೀಕಿ ಸಮುದಾಯದ ಮುಖಂಡರು ಹೋರಾಟಕ್ಕಿಳಿದಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಈ ವಿವಾದ ದೊಡ್ಡದಾಗುತ್ತಿದ್ದಂತೆಯೇ ಅಧಿಕಾರಿಗಳು ಅಲರ್ಟ್ ಆಗಿದ್ದರು. ವಾಲ್ಮೀಕಿ ಸಮುದಾಯದ ಮುಖಂಡರು ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ವಿವಾದಿತ ಸ್ಥಳ ವಾಲ್ಮೀಕಿ ಭವನಕ್ಕೆ ಸೇರಿದ್ದು, ಅಂತಲೇ ದಾಖಲೆಗಳಲ್ಲಿ ಉಲ್ಲೇಖವಿದೆ. ಆದರೆ ಅಧಿಕಾರಿಗಳು ಅನಧಿಕೃತ ಕಟ್ಟಡ ಅಂತ ಹೇಳ್ತಿದ್ದಾರೆ ಹೊರತು ಅದನ್ನ ತೆರವುಗೊಳಿಸಲು ಮುಂದಾಗುತ್ತಿಲ್ಲವಂತೆ. ಇದು ವಾಲ್ಮೀಕಿ ಸಮುದಾಯವನ್ನ ಕೆರಳಿಸಿದೆ.
ಇದೇ ಕಾರಣಕ್ಕೆ ನಿನ್ನೆ ಗೋನವಾರ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಂಧನೂರು ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮ ಸಭೆ ನಡೆದಿದೆ. ಈ ವೇಳೆ ವಾಲ್ಮೀಕಿ ಸಮುದಾಯದ ಮುಖಂಡರು ಅನಧಿಕೃತ ಕಟ್ಟಡ ತೆರುವುಗೊಳಿಸಿ ಅಂತ ಪಟ್ಟು ಹಿಡಿದಿದ್ದಾರೆ. ಈ ವೇಳೆ ಅಧಿಕಾರಿಗಳು ಹೋರಾಟಗಾರರ ಮಧ್ಯೆ ವಾಗ್ವಾದ ಕೂಡ ನಡೆದಿದೆ. ಆದರೆ ದಾಖಲೆಗಳಲ್ಲಿ ಸ್ಪಷ್ಟವಾಗಿ ವಾಲ್ಮೀಕಿ ಸಮುದಾಯದ ಕಟ್ಟಡ ಅಂತಿದ್ದರೂ ಅಧಿಕಾರಿಗಳ ಕ್ರಮಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದರಿಂದ ವಿರುದ್ಧ ಹೋರಾಟಗಾರರು ಕೆರಳಿದ್ದು, ನಮಗೆ ನ್ಯಾಯ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು: ರೊಟ್ಟಿ, ಬೆಂಡೆಕಾಯಿ ಪಲ್ಯ ಸೇವಿಸಿದ್ದ 7 ಜನರು ಅಸ್ವಸ್ಥ
ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕೇಸ್ ದಾಖಲಿಸಬೇಕು. ಇಲ್ಲದಿದ್ದರೆ ಬೂದಿ ಮುಚ್ಚಿದ ಕೆಂಡದಂತಿರುವ ಪ್ರಕರಣ ಯಾವಾಗ ಬೇಕಾದರೂ ದೊಡ್ಡ ವಿವಾದಕ್ಕೆ ದಾರಿ ಮಾಡಿಕೊಡುವುದರಲ್ಲಿ ಅನುಮಾನವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.