ಹೈಕೋರ್ಟ್​ನಲ್ಲಿ ಹೇಗಿತ್ತು ಸಿದ್ದರಾಮಯ್ಯ ಪರ, ವಿರುದ್ಧ ವಕೀಲರ ವಾದ ವೈಖರಿ? ಇಲ್ಲಿದೆ ವಿವರ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 31, 2024 | 8:33 PM

ಮುಡಾ ಹಗರಣ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜಭವನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಶನಿವಾರವೂ ಸುಧೀರ್ಘ ವಿಚಾರಣೆ ನಡೆಯಿತು. ಸಿಎಂ ವಿರುದ್ಧ ತನಿಖೆಗೆ ಆದೇಶಿಸಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಸಿಎಂ ಪರ ವಕೀಲರು ಮತ್ತು ಸಾಲಿಸಿಟರ್ ಜನರಲ್ ಮಂಡಿಸಿದ ಸುದೀರ್ಘ ವಾದದ ವಿವರ ಇಲ್ಲಿದೆ.

ಹೈಕೋರ್ಟ್​ನಲ್ಲಿ ಹೇಗಿತ್ತು ಸಿದ್ದರಾಮಯ್ಯ ಪರ, ವಿರುದ್ಧ ವಕೀಲರ ವಾದ ವೈಖರಿ? ಇಲ್ಲಿದೆ ವಿವರ
ಮುಡಾ ಹಗರಣ
Follow us on

ಬೆಂಗಳೂರು, ಆಗಸ್ಟ್ 31: ಮುಡಾ ಹಗರಣ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜಭವನ ನಡುವಣ ಸಂಘರ್ಷಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಶನಿವಾರವೂ ವಿಚಾರಣೆ ನಡೆಯಿತು. ಹಿಂದಿನ ವಿಚಾರಣೆ ವೇಳೆ ಸಿಎಂ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸೆಕ್ಷನ್ 17A ಅಡಿ ಮಾನದಂಡ ಪಾಲನೆಯಾಗಿಲ್ಲ. ರಾಜ್ಯಪಾಲರ ಪ್ರಾಸಿಕ್ಯೂಷನ್ ರದ್ದುಪಡಿಸಬೇಕು ಎಂದು ವಾದ ಮಂಡನೆ ಮಾಡಿದ್ದರು. ಆ ವಾದಕ್ಕೆ ಇವತ್ತು ಪ್ರತಿವಾದ ಮುಂದುವರೆದಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. 5 ಅಂಶಗಳ ಆಧಾರದಲ್ಲಿ ವಾದ ಮಂಡಿಸುತ್ತಿದ್ದೇನೆ ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಿಎಂ ಪರ ವಕೀಲ ರವಿವರ್ಮ ಕುಮಾರ್, ರಾಜ್ಯಪಾಲರ ಆದೇಶದ ಒಂದು ಪ್ಯಾರಾ ಓದೋದಾಗಿ ಮನವಿ ಮಾಡಿದರು.

ಸಿಎಂ ಪರ ವಕೀಲ ರವಿವರ್ಮ ಕುಮಾರ್ ವಾದ

‘ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳಡಿಯಲ್ಲಿ ತನಿಖೆಗೆ ಅನುಮತಿ ನೀಡಲಾಗಿದೆ. ಆರೋಪಿತ ಘಟನೆ ನಡೆದಾಗ ಭಾರತೀಯ ನ್ಯಾಯ ಸಂಹಿತೆ ಜಾರಿಯಲ್ಲಿರಲಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿಯೇ ಕಾನೂನುಬಾಹಿರ. ಐಪಿಸಿ ಸೆಕ್ಷನ್‌ನಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಲ್ಲವೆಂಬುದಕ್ಕೆ ಇದು ಸಾಕ್ಷಿ. ಸಿಎಂ ಪತ್ನಿ ಪಾರ್ವತಿ ಹಾಗೂ ಅವರ ಸಹೋದರನ ವಿರುದ್ಧ ಆರೋಪವಿದೆ. ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ?’ ಹೀಗೆಂದು ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದರು.

ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ ಮೆಹ್ತಾ, ಪತ್ನಿ ಪರವಾಗಿ ಪತಿಗೆ ಪವಿತ್ರವಾದ ಹೊಣೆಗಾರಿಕೆ ಇರುತ್ತದೆ. ಎಲ್ಲಾ ಲೋಪಗಳನ್ನೂ ಪತಿ ಪತ್ನಿ ಮೇಲೆ ಹೊರಿಸಬಾರದು ಎಂದು ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ

17A ಅಡಿಯಲ್ಲಿ ಮೇಲ್ನೋಟಕ್ಕೆ ಅಪರಾಧ ಕಂಡುಬರುತ್ತದೆಯೇ ನೋಡಬೇಕು. ರಾಜ್ಯಪಾಲರು ನ್ಯಾಯಮೂರ್ತಿಯಲ್ಲ, ಅವರು ಅಂತಿಮ ತೀರ್ಪು ನೀಡುತ್ತಿಲ್ಲ. ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಇಲ್ಲವೇ ನೋಡಬೇಕು. ರಾಜ್ಯಪಾಲರು ವಿವರ ಕಾರಣ ನೀಡಿದರೆ ತನಿಖೆ ಮೇಲೆ ಪ್ರಭಾವವಾಗುತ್ತದೆ. ಹೀಗಾಗಿ ಕೇವಲ ವಿವೇಚನೆ ಬಳಸಿ ರಾಜ್ಯಪಾಲರು ತೀರ್ಮಾನಿಸಬೇಕು. 17 ಎ ಹಂತದಲ್ಲಿ ಸಹಜ ನ್ಯಾಯ ಪಾಲಿಸಬೇಕಾದ ಅಗತ್ಯವಿಲ್ಲ. ಸಿಎಂಗೆ ಶೋಕಾಸ್ ನೋಟಿಸ್ ನೀಡಲೇಬೇಕೆಂಬ ನಿಯಮವಿಲ್ಲ. ಹೀಗಾಗಿ ಅಬ್ರಹಾಂ ದೂರಿಗೆ ಮಾತ್ರ ಶೋಕಾಸ್ ನೋಟಿಸ್ ನೀಡಿದ್ದಾರೆ. ಉಳಿದ ಇಬ್ಬರ ದೂರಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ನೀಡಿಲ್ಲ. ಶೋಕಾಸ್ ನೋಟಿಸ್ ನೀಡಬೇಕಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ತುಷಾರ್ ಮೆಹ್ತಾ ವಾದ ಮಂಡನೆ ಮಾಡಿದರು.

ಪತ್ನಿಯ ಮೇಲಿನ ಕ್ರಿಮಿನಲ್ ಹೊಣೆಗಾರಿಕೆ ಪತಿ ಮೇಲೆ ವರ್ಗಾಯಿಸಬಾರದು ಎಂದು ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಇದಕ್ಕೆ ಪ್ರತಿ ವಾದ ಮಂಡಿಸಿದ ತುಷಾರ್ ಮೆಹ್ತಾ, ಸಿಂಘ್ವಿ ಅವರ ಮಾತನ್ನು ಒಪ್ಪಿದರೆ 17ಎ ಅಡಿ ಅನುಮತಿಯೇ ಬೇಕಿಲ್ಲ ಎಂದರು. ಹೈಕೋರ್ಟ್‌ಗೆ ಲಿಖಿತ ಹೇಳಿಕೆ ಸಲ್ಲಿಸಿದರು. ರಾಜ್ಯಪಾಲರ ಕಡತವನ್ನ ಸಲ್ಲಿಸಿದರು. ಕ್ಯಾಬಿನೆಟ್ ನಿರ್ಣಯದ ಬಗ್ಗೆಯೂ ಪ್ರಸ್ತಾಪಿಸಿ ವಾದಿಸಿದರು.

ಸಚಿವ ಸಂಪುಟದ ಮಂತ್ರಿಗಳನ್ನು ಸಿಎಂ ಆಯ್ಕೆ ಮಾಡುತ್ತಾರೆ. ಹೀಗಾಗಿ ತಮ್ಮನ್ನು ಆಯ್ಕೆ ಮಾಡಿದ ಸಿಎಂ ವಿರುದ್ಧ ಕ್ಯಾಬಿನೆಟ್ ನಿರ್ಣಯ ಸಾಧ್ಯವಿಲ್ಲ. ಆದ್ದರಿಂದ ಇಂತಹ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಒಪ್ಪಬೇಕಿಲ್ಲ. ಕ್ಯಾಬಿನೆಟ್ ಸೂಚನೆಯನ್ನೂ ಏಕೆ ಪಾಲಿಸಿಲ್ಲವೆಂಬುದನ್ನೂ ರಾಜ್ಯಪಾಲರು ಹೇಳಿದ್ದಾರೆ. ಮುಡಾ ಆರೋಪಗಳ ಬಗ್ಗೆಯೂ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. 40-60 ಬದಲು 50-50 ಗೆ ನಿಯಮ ಬದಲಾಯಿಸಲಾಗಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಬಹಳ ಪ್ರತಿಷ್ಟಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ.. ಇಷ್ಟೆಲ್ಲಾ ಅಂಶಗಳಿದ್ದರೂ ಕ್ಯಾಬಿನೆಟ್ ತಾರತಮ್ಯಪೂರಿತ ನಿರ್ಣಯ ಕೈಗೊಂಡಿದೆ ಎಂದು ಮೆಹ್ತಾ ವಾದಿಸಿದರು.

ರಾಜ್ಯಪಾಲರ ಕಡತ ಗಮನಿಸಿದರೆ ವಿವೇಚನೆ ಬಳಸಿರುವುದು ತಿಳಿಯುತ್ತದೆ. ಆಗಸ್ಟ್ 14 ರಂದೇ ಎಲ್ಲಾ ಕಡತಗಳನ್ನು ಓದಿ ನೋಟ್ಸ್ ಮಾಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನೂ ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ. ದೂರಿನ ವಿವರ, ಕ್ಯಾಬಿನೆಟ್ ಸಲಹೆ, ತಮ್ಮ ಅಭಿಪ್ರಾಯ ಎಲ್ಲವನ್ನೂ ದಾಖಲಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಪರಿಶೀಲಿಸಿ ಆದೇಶಿಸಿದ್ದಾರೆ. ಇದು ತನಿಖೆಗೆ ನೀಡಿರುವ ಅನುಮತಿ ಎಂದಷ್ಟೇ ಪರಿಗಣಿಸಬೇಕು. 17 ಎ ಅಡಿ ಅನುಮತಿ ನೀಡುವ ಮುನ್ನ ಇಷ್ಟನ್ನಷ್ಟೇ ನೋಡಬೇಕು ಎಂದರು.

17A ಅಡಿ ಸಹಜ ನ್ಯಾಯ ಪಾಲಿಸಬೇಕಾದರೆ ಎಫ್‌ಐಆರ್ ದಾಖಲಿಸುವ ಮುನ್ನವೂ ಪಾಲಿಸಬೇಕೇ? ಎಫ್‌ಐಆರ್ ದಾಖಲಿಸುವ ಮುನ್ನವೂ ಆರೋಪಿಯ ಹೇಳಿಕೆ ದಾಖಲಿಸಬೇಕೇ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನಿಸಿದರು.

17A ಮೊದಲು ಪ್ರಾಥಮಿಕ ತನಿಖೆಯೂ ಬೇಕಿಲ್ಲವೆಂಬುದೇ ನನ್ನ ವಾದ. ಎಲ್ಲದರ ವಿಚಾರಣೆ ನಡೆಸಿದರೆ ಸಾಕ್ಷ್ಯನಾಶವಾಗಬಹುದು. ಪೊಲೀಸರ ತನಿಖೆ ಮೇಲೆಯೂ ಇದರ ಪರಿಣಾಮವಾಗಬಹುದು ಎಂದು ತುಷಾರ್ ಮೆಹ್ತಾ ಪ್ರತಿಕ್ರಿಯಿಸಿದರು. ಜತೆಗೆ, ರಾಜ್ಯಪಾಲರ ಒರಿಜಿನಲ್ ಫೈಲ್‌ ಕೋರ್ಟ್‌ಗೆ ಸಲ್ಲಿಸಿದರು.

91 ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿಯೇ ಇಷ್ಟು ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ಯಾರೂ ತೆಗೆದುಕೊಂಡಿಲ್ಲ. ಅಡ್ವೋಕೇಟ್ ಜನರಲ್ ಅಭಿಪ್ರಾಯದ ಕಾಮಾ, ಫುಲ್‌ ಸ್ಟಾಪ್‌ ಅನ್ನೂ ಬಿಟ್ಟಿಲ್ಲ. ಕ್ಯಾಬಿನೆಟ್ ಎಲ್ಲವನ್ನೂ ಹಾಗೆಯೇ ನಿರ್ಣಯವಾಗಿ ಅಂಗೀಕರಿಸಿದೆ. ಸಿಎಂ ಪ್ರತಿಕ್ರಿಯೆಯಲ್ಲಿಯೂ ವಿವೇಚನೆ ಬಳಸಿಲ್ಲ. ಸಿಎಂ ಸಹ ಎಜಿ ಅಭಿಪ್ರಾಯ, ಕ್ಯಾಬಿನೆಟ್ ನಿರ್ಣಯದ ಭಾಗಗಳನ್ನೇ ತಮ್ಮ ಪ್ರತಿಕ್ರಿಯೆ ಎಂದು ನೀಡಿದ್ದಾರೆ. ಬೆಂಗಳೂರು ಐಟಿಯ ಹೃದಯ, ಆದರೆ ಇವರು ಕಾಪಿಯನ್ನೂ ಸರಿಯಾಗಿ ಮಾಡಿಲ್ಲ. ಇದು ಕಲೆಕ್ಟೀವ್ ಸ್ಟುಪಿಡಿಟಿ ಎಂಬುದು ಮೇಲ್ನೋಟಕ್ಕೇ ಕಾಣುತ್ತಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ 17 ಎ ಅಡಿ ಅನುಮತಿ ತೀರ್ಪಿನಂತಿರಬೇಕಿಲ್ಲ. ಕ್ಯಾಬಿನೆಟ್ ಮತ್ತು ಸಿಎಂ ಅವರ ಪ್ರತಿ ಸ್ಪಷ್ಟನೆಗೂ ಉತ್ತರ ನೀಡಬೇಕಿಲ್ಲ ಎಂದು ತುಷಾರ್ ಮೆಹ್ತಾ ವಾದಿಸಿದರು.

ಮುಖ್ಯಮಂತ್ರಿಯ ವಿರುದ್ಧ ತನಿಖೆಗೆ ನಿರ್ಧರಿಸುವಾಗ ಸಚಿವ ಸಂಪುಟದ ಸಲಹೆ ಪರಿಗಣಿಸುವಂತಿಲ್ಲ. ಸಿಎಂ ಆಯ್ಕೆ ಮಾಡುವ ಸಚಿವ ಮುಖ್ಯಮಂತ್ರಿಗೆ ನಿಷ್ಠೆಯಾಗಿರುತ್ತಾನೆ. ಮುಖ್ಯಮಂತ್ರಿಯ ವಿರುದ್ಧವೇ ಆರೋಪವಿದ್ದಾಗ ಅವರ ಸಲಹೆ ಪರಿಗಣಿಸಬಾರದು. ಹೀಗಾಗಿ ಕ್ಯಾಬಿನೆಟ್ ಸೂಚನೆಯನ್ನು ಕಣ್ಣೆತ್ತಿಯೂ ನೋಡುವ ಅಗತ್ಯವಿಲ್ಲ. ಆದರೂ ಕ್ಯಾಬಿನೆಟ್ ಸೂಚನೆಯನ್ನು ರಾಜ್ಯಪಾಲರು ಓದಿ, ಪರಿಶೀಲಿಸಿ ಉತ್ತರಿಸಿದ್ದಾರೆ. ಸಿಎಂ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿಲ್ಲದಿರಬಹುದು. ಆದರೆ ಅವರು ನೇಮಿಸಿದ ವ್ಯಕ್ತಿಯೇ ಸಂಪುಟ ಸಭೆಯ ನೇತೃತ್ವ ವಹಿಸಿದ್ದಾರೆ. ರೂಲ್ 28 ಅಡಿ ಸಿಎಂ ತಮ್ಮ ಬದಲು ಡಿಸಿಎಂ ಡಿಕೆ ಶಿವಕುಮಾರ್‌ರನ್ನು ನೇಮಿಸಿದ್ದಾರೆ. ಹೀಗಾಗಿ ಅಂತಹ ಸಭೆಯ ನಿರ್ಣಯಕ್ಕೆ ಯಾವುದೇ ಮಹತ್ವವಿಲ್ಲ. ಸಚಿವ ಸಂಪುಟದ ನಿರ್ಣಯ ತಾರತಮ್ಯ ಪೂರಿತವಾಗಿರುವ ಸಾಧ್ಯತೆ ಇರುತ್ತದೆ. ಈ ವೇಳೆ ನಿರ್ಣಯ ಕೈಗೊಳ್ಳಲು ಸಿಎಂ ಅನರ್ಹವಾಗುವಂತೆ ಕ್ಯಾಬಿನೆಟ್ ನಿರ್ಣಯ ಕೂಡಾ ಅನರ್ಹಗೊಳ್ಳುತ್ತದ ಎಂದು ಮೆಹ್ತಾ ವಾದ ಮಂಡನೆ ಮಾಡಿದರು.

ನ್ಯಾಯಮೂರ್ತಿ ಪ್ರತಿಕ್ರಿಯೆ ಏನಿತ್ತು?

ಮುಖ್ಯಮಂತ್ರಿಯ ಪ್ರಾಸಿಕ್ಯೂಷನ್ ವೇಳೆ ಸಚಿವ ಸಂಪುಟದ ನಿರ್ಣಯ ಬೇಕಿಲ್ಲ. ಹೀಗೆಂದು ಹಲವು ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.

ಇದಾದ ನಂತರ ವಾದ ಮುಂದುವರಿಸಿದ ತುಷಾರ್ ಮೆಹ್ತಾ, ಸಿಎಂ ಪರ ಅಭಿಷೇಕ್ ಮನುಸಿಂಘ್ವಿ ಉಲ್ಲೇಖಿಸಿದ ತೀರ್ಪುಗಳು ರಾಜ್ಯಪಾಲರ ಪರವಾಗಿಯೇ ಇವೆ ಎಂದರು. ಅಲ್ಲದೇ ರಾಜ್ಯಪಾಲರ ಬಗ್ಗೆ ಕಾಂಗ್ರೆಸ್ ನಾಯಕರು ಬಳಸಿದ್ದ ಪದಗಳನ್ನೂ ಉಲ್ಲೇಖಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಕಾಂಗ್ರೆಸ್ ನಾಯಕರ ಬಳಿ ರಾಜ್ಯಪಾಲರಿಂದ ಅಚ್ಚರಿಯ ಹೇಳಿಕೆ

ರಾಜ್ಯಪಾಲರು ತರಾತುರಿಯ ತೀರ್ಮಾನ ಕೈಗೊಂಡಿದ್ದಾರೆಂದು ಆರೋಪಿಸಲಾಗಿದೆ. ಅದು ಸುಳ್ಳು. ರಾಜ್ಯಪಾಲರ ಬಗ್ಗೆಯೂ ಫ್ರೆಂಡ್ಲಿ, ಕಾಮಿಕಲ್ ಎಂಬ ಪದ ಬಳಸಲಾಗಿದೆ. ನಾನು ಸಿಎಂ ಬಗ್ಗೆ ಅಂತಹ ಪದ ಬಳಸುವುದಿಲ್ಲ. ಸಾಂವಿಧಾನಿಕ ಹುದ್ದೆಯ ಬಗ್ಗೆ ಗೌರವ ಇರಬೇಕು. ಸಾಂವಿಧಾನಿಕ ಕರ್ತವ್ಯದಲ್ಲಿರುವಾಗ ಕೆಲವೊಮ್ಮ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು. ಸಿಎಂ ಯಾವುದೇ ನಿರ್ಣಯ ಕೈಗೊಂಡಿಲ್ಲ, ಶಿಫಾರಸ್ಸು ಮಾಡಿಲ್ಲವಾದರೆ ಏಕೆ ಚಿಂತೆಗೊಳಗಾಗಿದ್ದಾರೆ ಎಂದು ತುಷಾರ್ ಮೆಹ್ತಾ ವಾದಿಸಿದರು.

ಈ ರೀತಿ ವಾದ ಮಂಡಿಸಿದ ತುಷಾರ್ ಮೆಹ್ತಾ ವಾದ ಅಂತ್ಯಗೊಳಿಸಿದರು. ಇದಾದ ನಂತ್ರ ಸ್ನೇಹಮಯಿ ಕೃಷ್ಣ ಪರ ವಕೀಲ ಮಣೀಂದರ್ ಸಿಂಗ್ ವಾದ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:50 pm, Sat, 31 August 24