ಬೆಂಗಳೂರು: ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಬೇಡ ಎಂಬ ಆರ್ಎಸ್ಎಸ್ ಮುಖ್ಯಸ್ಥರಾದ ಸರಸಂಘಚಾಲಕ ಮೋಹನ್ ಭಾಗವತ್ (Rashtriya Swayam Sevak Sangh – RSS) ಅವರ ಹೇಳಿಕೆಯನ್ನು ಮುಸ್ಲಿಮ್ ನಾಯಕ ಅಬ್ದುಲ್ ರಜಾಕ್ ಖಂಡಿಸಿದ್ದಾರೆ. ಈ ಕುರಿತು ಟಿವಿ9 ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಅವರು, ವಿವಾದ ಆರಂಭಿಸುವುದೇ ಇವರು. ಈಗ ತಡೆಯೋಣ ಎನ್ನುವುದೂ ಇವರೇ. ಈಗ ಚರ್ಚೆಯಲ್ಲಿರುವ ವಿವಾದಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಇವರಿಗೆ ಚೆನ್ನಾಗಿ ಗೊತ್ತು ಎಂದು ಅವರು ಹೇಳಿದ್ದಾರೆ.
ವಿಡಿಯೊ ಸರ್ವೆ ಬಳಿಕ ಅದು ಲಿಂಗ ಎಂದು ಹೇಳುತ್ತಿದ್ದಾರೆ. ಸರ್ಕಾರಗಳು ಇಂಥ ವಿಚಾರಗಳನ್ನು ಕೈಬಿಟ್ಟು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು. ಇಷ್ಟು ದಿನದಿಂದ ಮೋಹನ್ ಭಗವತ್ ಏನು ಮಾಡುತ್ತಿದ್ದರು? ಈಗ ಬಂದು ಶಿವಲಿಂಗ ಹುಡುಕುವುದು ಬೇಡ ಎಂದು ಹೇಳಿದ್ದಾರೆ. ಇಷ್ಟು ದಿನದ ನಮ್ಮ ನೆಮ್ಮದಿ ಹಾಳಾಗಿದೆ. ಜನರ ಭಾವನೆಗಳ ಜೊತೆಗೆ ಯಾರೂ ಆಟವಾಡಬಾರದು ಎಂದು ಆಗ್ರಹಿಸಿದರು.
ತಡವಾದರೂ ಪರವಾಗಿಲ್ಲ, ಈಗಲಾದರೂ ಅವರು ಮಾತಾಡಿದ್ದಾರೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿವಾದನಗಳಿಗೆ ಕಡಿವಾಣ ಹಾಕಲು ಏನಾದರೂ ಮಾಡಲಿ. ಮಂಡ್ಯ, ಮಂಗಳೂರು, ಚಾಮರಾಜಪೇಟೆ ವಿವಾದಗಳು ನಿಲ್ಲಲಿ ಎಂದು ಒತ್ತಾಯಿಸಿದರು.
ಸಮನ್ವಯ ಸಮಿತಿ ಎದುರು ಹೋರಾಟ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಿಜಾಬ್ ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ವಿವಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್, ವಿವಾದಗಳನ್ನು ತಿಳಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ಕೊಡುತ್ತೇವೆ. ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ ಮಂಗಳೂರು ವಿವಿ ಸಮನ್ವಯ ಸಮಿತಿ ಮುಂದೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದವು ಸರ್ಕಾರಿ ಪ್ರೇರಿತ. ಪಠ್ಯಪುಸ್ತಕ ವಿವಾದದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಹಿಜಾಬ್ ವಿವಾದ ಹುಟ್ಟುಹಾಕಲಾಗಿದೆ. ಬಲಪಂಥೀಯ ವಿದ್ಯಾರ್ಥಿ ಸಂಘಟನೆಯೇ ಆಗಿರುವ ಎಬಿವಿಪಿ ಕಾಲೇಜಿನಲ್ಲಿ ಗಲಭೆ ಹುಟ್ಟುಹಾಕಲು ಯತ್ನಿಸುತ್ತಿದೆ. ಹೈ ಕೋರ್ಟ್ ತೀರ್ಪು ಬಂದ ಬಳಿಕ ಎರಡು ತಿಂಗಳು ಈ ಸಮಸ್ಯೆ ಇರಲಿಲ್ಲ. ಆದರೆ ಎಬಿವಿಪಿ ಒತ್ತಡದಿಂದ ಮತ್ತೆ ಈ ವಿವಾದ ಸೃಷ್ಟಿ ಮಾಡಲಾಗಿದೆ ಎಂದು ಆರೋಪ ಮಾಡಿದರು. ಉಪ್ಪಿನಂಗಡಿ ಕಾಲೇಜಿನಲ್ಲಿ ಅಮಾನತಾದ ವಿದ್ಯಾರ್ಥಿನಿಯರು ನಮ್ಮನ್ನು ಸಂಪರ್ಕಿಸಿದರೆ ಬೆಂಬಲಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ನಡೆಗಳನ್ನು ಖಂಡಿಸಿದ ಉಪನ್ಯಾಸಕ
ಗದಗ: ರಾಜ್ಯ ಸರ್ಕಾರ, ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಗಳ ವಿರುದ್ಧ ಗದಗ ಗ್ರಾಮೀಣ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಎಚ್.ಕೆ.ಭಾರ್ಗವ್ ಟ್ವೀಟ್ ಮಾಡಿದ್ದಾರೆ. ಗದಗದ ಗ್ರಾಮೀಣ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ.
ಬೆಳಗಾವಿಯಲ್ಲಿ ಗೃಹ ಮಂತ್ರಿ ಶಿವಾಜಿ ಪುತ್ಥಳಿ ಅನಾವರಣ ಮಾಡುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಎಲ್ಲಿವೆ. ಹಿಂದೂ ವೋಟ್ಬ್ಯಾಂಕ್ಗಾಗಿ ಶಿವಾಜಿಯನ್ನು ಇವರು ಆರಾಧಿಸುತ್ತಿದ್ದಾರೆ. ಹಾರ್ದಿಕ್ ಪಟೇಲ್ ಪಲ್ಲಂಗದ ವಿಡಿಯೊ ಬಿಡುಗಡೆ ಮಾಡುವ ಬಿಜೆಪಿಯು ಮತ್ತೊಂದೆಡೆ ಅವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದೆ. ಬಸವಣ್ಣನವರನ್ನು ಅವಮಾನ ಮಾಡಲು ಶಿವಾಜಿ ಫೋಟೋ ಇಟ್ಟು. ಶಿವ ಬಸವ ಜಯಂತಿ ಆಚರಿಸಲಾಗುತ್ತಿದೆ. ಭಕ್ತರು ತಮ್ಮ ಬಗ್ಗೆ ಹಿಂದಿಯಲ್ಲಿ ಬರೆದುಕೊಳ್ತಾರೆ. ಶಿವಾಜಿ ಫೋಟೋ ಹಾಕಿಕೊಳ್ತಾರೆ. ವಂದೇ ಮಾತರಂ ಎನ್ನುತ್ತಾರೆ. ಇವರಿಗೆ ಕನ್ನಡದ ನೆಲ ಯಾಕೆ ಬೇಕು. ಉತ್ತರ ಪ್ರದೇಶ, ಮಹಾರಾಷ್ಟ್ರ ಹೋಗಲಿ ಎಂದು ಆಗ್ರಹಿಸಿದ್ದಾರೆ.