ಗೋ ಸಾಗಾಟ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು: ರಾಜಸ್ಥಾನದಲ್ಲಿ ಪುನೀತ್ ‌ಕೆರೆಹಳ್ಳಿ ಬಂಧನ

|

Updated on: Apr 05, 2023 | 1:32 PM

ಮುಸ್ಲಿಂ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣದಲ್ಲಿ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋ ಸಾಗಾಟ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು: ರಾಜಸ್ಥಾನದಲ್ಲಿ ಪುನೀತ್ ‌ಕೆರೆಹಳ್ಳಿ ಬಂಧನ
ಪುನೀತ್ ಕೆರೆಹಳ್ಳಿ
Follow us on

ಬೆಂಗಳೂರು: ಕನಪುರದ ಸಾತನೂರು ಬಳಿ ಗೋ ಸಾಗಾಟ ವೇಳೆ ವ್ಯಕ್ತಿಯೋರ್ವ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ‌ಕೆರೆಹಳ್ಳಿ (Puneeth Kerehalli) ಬಂಧನವಾಗಿದೆ. ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ಪುನೀತ್ ‌ಕೆರೆಹಳ್ಳಿ ಸೇರಿದಂತೆ ಒಟ್ಟು ಐವರರನ್ನು ಸಾತನೂರು ಠಾಣೆ ಪೊಲೀಸರು ಇಂದು(ಏಪ್ರಿಲ್ 05) ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್ 31 ರಂದು ಪುನೀತ್ ಕೆರೆಹಳ್ಳಿ ಹಾಗೂ ತಂಡ ಗೋವುಗಳನ್ನು ಸಾಗಿಸುತ್ತದ್ದ ಕ್ಯಾಂಟರ್​ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಆದ್ರೆ, ಮಾರನೇ ದಿನ ಅಂದ್ರೆ ಏಪ್ರಿಲ್​ 1ರಂದು ಕ್ಯಾಂಟರ್​ನಲ್ಲಿದ್ದ ಇದ್ರೀಷ್ ಪಾಷ(35) ಶವವಾಗಿ ಪತ್ತೆಯಾಗಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಬಳಿ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಸಹೋದರ ಸಾತನೂರು ‌ಠಾಣೆಗೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರರರ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆಯೇ ಕಳೆದ ಐದು ದಿನದಿಂದ ಪುನೀತ್ ಅಂಡ್ ಟೀಂ ತಲೆ ಮರೆಸಿಕೊಂಡಿತ್ತು. ಇನ್ನು ಆರೋಪಿಗಳನ್ನು ಬಂಧಿಸಲು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ನಾಲ್ಕು ತಂಡಗಳನ್ನು ರಚಿಸಿದ್ದರು. ಇದೀಗ ಅಂತಿಮವಾಗಿ ಆರೋಪಿಗಳು ರಾಜಸ್ಥಾನದಲ್ಲಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ರಾಮನಗರ: ಕಸಾಯಿಖಾನೆಗೆ ಜಾನುವಾರು ಸಾಗಾಟ ವಾಹನದ ಮೇಲೆ ದಾಳಿ, ವಾಹನದಲ್ಲಿದ್ದ ವ್ಯಕ್ತಿ ನಿಗೂಢ ಸಾವು 

ನಿಗೂಢ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದ ಪುನೀತ್ ಕೆರೆಹಳ್ಳಿ

ಪೊಲೀಸರ ಕಣ್ತಪ್ಪಿಸಿಕೊಂಡಿದ್ದ ಪುನೀತ್ ಕೆರೆಹಳ್ಳಿ, ನನ್ನ ವಿರುದ್ಧ ಎಫ್ ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸುತ್ತೇನೆ. ಪ್ರಕರಣದ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ವಿಡಿಯೋ ಬಿಡುಗಡೆ ಮಾಡಿದ್ದ. ಎಲ್ಲೂ ಕಾನೂನನ್ನು ಮೀರಿಲ್ಲ, ಯಾರಿಗೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ದುಡ್ಡು ಮಾಡಲು ಈ ಹೋರಾಟಕ್ಕೆ ಬಂದಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಯಾರೇ ನನ್ನ ವಿರುದ್ಧ ನಿಂತರೂ ಹೋರಾಟ ಬಿಡುವುದಿಲ್ಲ ಎಂದು ವಿಡಿಯೋನಲ್ಲಿ ಹೇಳಿದ್ದ. ಅಲ್ಲದೇ ಮಂಡ್ಯದಿಂದ ಹಲಗೂರು, ಸಾತನೂರು ಮಾರ್ಗವಾಗಿ ನಿರಂತರವಾಗಿ ಜಾನುವಾರು ಸಾಗಣೆಯಾಗುತ್ತಿದ್ದು, ಇದಕ್ಕೆ ರಾಜಕಾರಣಿಗಳ ಕೃಪಾಕಟಾಕ್ಷವಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾನೆ.

ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದೇನು?

ಕನಕಪುರ (Kanakapura) ತಾಲೂಕಿನ ಸಾತನೂರು ಬಳಿ ಜಾನುವಾರು ರಕ್ಷಣೆ ವೇಳೆ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ, ಮೃತ ವ್ಯಕ್ತಿ ಇದ್ರೀಷ್ ಪಾಷ ಸಾವಿಗೆ ನಿಖರ ಕಾರಣ ಏನೆಂಬುದು ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ (FSL) ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ ಎಂದು ಹೇಳಿದ್ದರು.

,ಕನಕಪುರ ವೈದ್ಯರ ತಂಡವು ಇದ್ರೀಷ್ ಅವರ ಮರಣೋತ್ತರ ಪರೀಕ್ಷೆ ನಡೆಸಿದೆ. ಅವರಿಂದ ಎಫ್‌ಎಸ್‌ಎಲ್ ವರದಿಯನ್ನು ಪಡೆಯಲಾಗುತ್ತದೆ. ಸದ್ಯ ತನಿಖೆ ಪ್ರಗತಿಯಲ್ಲಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ. ಇಡೀ ಪ್ರಕರಣ ಕುರಿತು ಸಾತನೂರು ಠಾಣೆಯಲ್ಲಿ ಮೂರು ಎಫ್‌ಐಆರ್‌ಗಳು (FIR) ದಾಖಲಾಗಿವೆ ಎಂದು ತಿಳಿಸಿದ್ದರು.

ಇನ್ನಷ್ಟು ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:06 pm, Wed, 5 April 23