ಮುಸ್ಲಿಂ ಯುವಕರ ತಂಡದಿಂದ ಕೊವಿಡ್​ಗೆ ಬಲಿಯಾದವರ ಉಚಿತ ಅಂತ್ಯಸಂಸ್ಕಾರ; ತುಮಕೂರಿನಲ್ಲೊಂದು ಮಾನವೀಯ ಕಾರ್ಯ

|

Updated on: Apr 24, 2021 | 9:18 PM

ಕೊವಿಡ್​ನಿಂದ ಬಲಿಯಾದವರನ್ನು ಅವರವರ ಸಂಪ್ರದಾಯದಂತೆಯೇ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.  ಮೃತದೇಹದ ಕಡೆಯವರು ತಮಗೆ ಇಷ್ಟ ಬಂದಷ್ಟು ಸಹಾಯಧನ ನೀಡಿದರೆ ತೆಗೆದುಕೊಳ್ಳುತ್ತಾರೆ. ಹಣ ನೀಡದಿದ್ದರೂ ಅಂತ್ಯಸಂಸ್ಕಾರ ನಡೆಸಿಕೊಡುತ್ತಿದೆ ಈ ತಂಡ. 

ಮುಸ್ಲಿಂ ಯುವಕರ ತಂಡದಿಂದ ಕೊವಿಡ್​ಗೆ ಬಲಿಯಾದವರ ಉಚಿತ ಅಂತ್ಯಸಂಸ್ಕಾರ; ತುಮಕೂರಿನಲ್ಲೊಂದು ಮಾನವೀಯ ಕಾರ್ಯ
ಶವ ಸಂಸ್ಕಾರ ನಡೆಸುತ್ತಿರುವ ತಂಡ
Follow us on

ತುಮಕೂರು: ಕೊವಿಡ್ ಸೋಂಕು ಎಲ್ಲರನ್ನೂ ಭಾವನಾತ್ಮಕವಾಗಿ, ಮಾನಸಿಕವಾಗಿ ಒಗ್ಗೂಡಿಸುತ್ತಿದೆ.  ಮನುಷ್ಯರೆಲ್ಲರೂ ಒಂದೇ ಎಂಬ ಭಾವವನ್ನು ಎಲ್ಲರ ಮನಸ್ಸಿನಲ್ಲಿಯೂ ಮೂಡಿಸುತ್ತಿದೆ. ಕೊವಿಡ್​ನಿಂದ  ಉಂಟಾದ ಸಮಸ್ಯೆಯನ್ನು ಪರಿಹರಿಸಲು ಮುಸ್ಲಿಂ ಯುವಕರ ತಂಡವೊಂದು ನಡೆಸುತ್ತಿರುವ ಮಾನವೀಯ ಕಾರ್ಯಕ್ಕೆ ತುಮಕೂರು ಸಾಕ್ಷಿಯಾಗುತ್ತಿದೆ. 

ನಿನ್ನೆಯಿಂದ ಜಿಲ್ಲೆಯ ಮಧುಗಿರಿಯ ಎಂಟು ಮುಸ್ಲಿಂ ಯುವಕರ ತಂಡವೊಂದು ಸ್ವಯಂ ಪ್ರೇರಿತರಾಗಿ ತಾಲ್ಲೂಕು ಆಸ್ಪತ್ರೆ, ವಿವಿಧ ಖಾಸಗಿ ಆಸ್ಪತ್ರೆ ಗಳಲ್ಲಿ ಕೊವಿಡ್​ನಿಂದ ಮೃತಪಟ್ಟ ಶರೀರವನ್ನು ಆಯಾ ಗ್ರಾಮಗಳಲ್ಲಿ ಅವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿಕೊಡುತ್ತಿದೆ. ಸೈಯದ್ ಸಿಂದರ್,ಮಹಮ್ಮದ್ ಸುಹೇಲ್,ಮಹಮ್ಮದ್ ಶಾಮೀರ್,ಸಾದೀಕ್ ಷರೀಫ್ ಎಂಬ ಎಂಟು ಯುವಕರೇ ಈ ತಂಡದ ಸದಸ್ಯರು. ಕೊವಿಡ್ ಕಾರಣ ಮೃತರ ಸಂಬಂಧಿಕರು ಅಂತ್ಯಕ್ರಿಯೆ ಮಾಡಲು ಹಿಂದೇಟು ಹಾಕುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇದನ್ನು ಮನಗಂಡ ಮಧುಗಿರಿಯ ಮುಸ್ಲಿಂ ಯುವಕರ ತಂಡವೊಂದು ಕೊವಿಡ್ ಮುಗಿಯುವರೆಗೂ ಕೂಡ ಉಚಿತವಾಗಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದೆ.

ಕೊವಿಡ್​ನಿಂದ ಬಲಿಯಾದವರನ್ನು ಅವರವರ ಸಂಪ್ರದಾಯದಂತೆಯೇ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.  ಮೃತದೇಹದ ಕಡೆಯವರು ತಮಗೆ ಇಷ್ಟ ಬಂದಷ್ಟು ಸಹಾಯಧನ ನೀಡಿದರೆ ತೆಗೆದುಕೊಳ್ಳುತ್ತಾರೆ. ಹಣ ನೀಡದಿದ್ದರೂ ಅಂತ್ಯಸಂಸ್ಕಾರ ನಡೆಸಿಕೊಡುತ್ತಿದೆ ಈ ತಂಡ.  ನಿನ್ನೆಯಿಂದ 16ಕ್ಕೂ  ಹೆಚ್ಚು ಕೊವಿಡ್​ನಿಂದ ಮೃತಪಟ್ಟ ದೇಹಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ. ಇನ್ನೂ ಈ ಮುಸ್ಲಿಂ ಯುವಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ರಾಜ್ಯದಲ್ಲಿಂದು 29,438 ಜನರಿಗೆ ಕೊರೊನಾ ದೃಢಪಟ್ಟಿದೆ. ಇಂದು ಒಂದೇ ದಿನ ಸೋಂಕಿನಿಂದ 208 ಜನರ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೊಂದೇ ಇಂದು 17,342 ಜನರಿಗೆ ಸೋಂಕು ಖಚಿತವಾಗಿದೆ. ಮೃತಪಟ್ಟವರ ಪೈಕಿ ಬೆಂಗಳೂರಿನವರ ಸಂಖ್ಯೆಯೇ ಹೆಚ್ಚಿದ್ದು 149 ಜನರು ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,04,397ಕ್ಕೇರಿಕೆಯಾಗಿದೆ ಎಂದು ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟ 208 ಜನರನ್ನು ಸೇರಿಸಿ ಈವರೆಗೆ ಒಟ್ಟು 14,283 ಜನರು ಮೃತಪಟ್ಟಂತಾಗಿದೆ. ಈವರೆಗೆ ರಾಜ್ಯದ ಸೋಂಕಿತರ ಪೈಕಿ 10,55,612 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,34,483 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತುಮಕೂರಿನಲ್ಲಿ  ಕಳೆದ 24 ಗಂಟೆಗಳಲ್ಲಿ 1,559 ಸೋಂಕಿತರು ಪತ್ತೆಯಾಗಿದ್ದಾರೆ. ಜತೆಗೆ ಮೂವರು ಕೊವಿಡ್​ನಿಂದ ಮೃತಪಟ್ಟಿದ್ದಾರೆ.  ಇತರರ ಹತ್ತಿರಕ್ಕೂ ಹೋಗಲೂ ಭಯ ಬೀಳುವ ಈ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಅಂತ್ಯ ಸಂಸ್ಕಾರ ನೇರವೇರಿಸಲು ಬಂದಿರುವ ಯುವಕರ ತಂಡದ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
(Muslim youths made free cremation of people who dead by coronavirus in Tumkur)

Published On - 9:13 pm, Sat, 24 April 21