ಮೈಸೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ (Brain Dead)ಗೊಂಡ ಹಿನ್ನೆಲೆ ಆತನ ಅಂಗಾಂಗಗಳನ್ನು ದಾನ (Organs Donate) ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮರೆದಿದ್ದಾರೆ. ಯುವಕನ ಅಂಗಾಂಗ ದಾನದಿಂದಾಗಿ ಒಟ್ಟು 8 ಜನರ ಬಾಳಿಗೆ ಬೆಳಕು ನೀಡಿದಂತಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ನಿವಾಸಿ ಲೋಹಿತ್ ಕಳೆದ ವಾರ ಕಾರು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನದ ಮೂಲಕ ಸಾರ್ಥಕ ಜೀವನ ಮರೆದಿದ್ದಾರೆ.
ಕಳೆದ ವಾರ ಹುಣಸೂರು ತಾಲ್ಲೂಕು ಬಿಳಿಕೆರೆ ಬಳಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕನಾಗಿದ್ದ ಪಿರಿಯಾಪಟ್ಟಣ ನಿವಾಸಿ ಲೋಹಿತ್ ಅವರ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದವು. ಅದರಂತೆ ಒಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಲೋಹಿತ್ನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಲೋಹಿತ್ ಅವರ ಹೃದಯ, ಲಿವರ್ ಯಕೃತ್ ಮೇಜೋಜೀರಕ ಗ್ರಂಥಿ, ಕಿಡ್ನಿ ಸೇರಿ ಹಲವು ಅಂಗಗಳನ್ನು ದಾನ ಮಾಡಲಾಗಿದೆ. ಈ ಪೈಕಿ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಿ ಅಗತ್ಯ ರೋಗಿಗೆ ಅಳವಡಿಸಲಾಗಿದ್ದು, ಕಿಡ್ನಿಗಳನ್ನು ಮೈಸೂರಿನ ಅಪೋಲೋ ಆಸ್ಪತ್ರೆಯ ರೋಗಿಗಳಿಗೆ ಅಳವಡಿಸಲಾಗಿದೆ. ಉಳಿದಂತೆ ವಿವಿಧ ಅಂಗಾಂಗಗಳನ್ನು ಬಿಜಿಎಸ್ ಹಾಗೂ ಕೆ.ಆರ್ ಆಸ್ಪತ್ರೆ ರೋಗಿಗಳಿಗೆ ಅಳವಡಿಕೆ ಮಾಡಲಾಗಿದೆ. ಹೀಗೆ ಲೋಹಿತ್ ಅಂಗಾಂಗಗಳಿಂದಾಗಿ 8 ಮಂದಿಗೆ ಮರುಜನ್ಮ ಬಂದಂತಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:13 am, Sun, 2 October 22