ಮೈಸೂರಿನಲ್ಲಿ ಬೋನಿಗೆ ಬಿತ್ತು 8 ವರ್ಷದ ಹೆಣ್ಣು ಹುಲಿ: ಆದರೆ ಜನರಲ್ಲಿ ಹೆಚ್ಚುತ್ತಿದೆ ಆತಂಕ

| Updated By: ಸಾಧು ಶ್ರೀನಾಥ್​

Updated on: Mar 01, 2021 | 1:35 PM

ಕೇರಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹುಲಿ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಾಣೂರು ಗ್ರಾಮದಲ್ಲಿ ಅದೇ ಹುಲಿಯನ್ನು ಸೆರೆಹಿಡಿಯಾಗಿದೆ.

ಮೈಸೂರಿನಲ್ಲಿ ಬೋನಿಗೆ ಬಿತ್ತು 8 ವರ್ಷದ ಹೆಣ್ಣು ಹುಲಿ: ಆದರೆ ಜನರಲ್ಲಿ ಹೆಚ್ಚುತ್ತಿದೆ ಆತಂಕ
ಮೈಸೂರಿನಲ್ಲಿ ಬೋನಿಗೆ ಬಿದ್ದ ಹುಲಿ
Follow us on

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬೇಗೂರು ಅರಣ್ಯ ಪ್ರದೇಶದಲ್ಲಿ, 8 ವರ್ಷದ ಹೆಣ್ಣು ಹುಲಿಯೊಂದು ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ಬೋನಿಗೆ ಬಿದ್ದಿದ್ದು, ಗಾಯಗೊಂಡ ಹುಲಿಯನ್ನು ಚಿಕಿತ್ಸೆಗಾಗಿ ಮೈಸೂರು ಮೃಗಾಲಯದ ಚಾಮುಂಡಿ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ಕೇರಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹುಲಿ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಾಣೂರು ಗ್ರಾಮದಲ್ಲಿ ಅದೇ ಹುಲಿಯನ್ನು ಸೆರೆಹಿಡಿಯಾಗಿದೆ. ಮೂರು ದಿನದ ಹಿಂದೆ ರಾಷ್ಟ್ರೀಯ ಹೆದ್ದಾರಿ ಬೇಗೂರು ಕಾಡಿನ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದ ಹುಲಿಗಾಗಿ ಸಾಕಾನೆಗಳ‌ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ನಂತರ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟಿದ್ದು, ಬೋನಿನಲ್ಲಿ 8ವರ್ಷದ ಹೆಣ್ಣು ಹುಲಿ ಬಂಧಿಯಾಗಿದೆ.

ಇನ್ನೂ ಇತ್ತೀಚಿನ ದಿನಗಳಲ್ಲಿ ಹುಲಿಯ ಆತಂಕ ಹಲವೆಡೆ ಹೆಚ್ಚಾಗಿದ್ದು, ಬೆಳಗಾವಿಯಲ್ಲಿಯೂ ಕೂಡ ಇದಕ್ಕೆ ಹೊರತಾಗಿಲ್ಲ. ಖಾನಾಪುರ ತಾಲೂಕಿನ ಭೀಮಗಡ್ ಅರಣ್ಯ ವಲಯ ವ್ಯಾಪ್ತಿಯ ಹೆಮ್ಮಡಗಾ ಗ್ರಾಮದಲ್ಲಿ ಹುಲಿ ಆತಂಕ ಹೆಚ್ಚಾಗಿದೆ. ಇಲ್ಲಿ ಕಳೆದ ಆರು ತಿಂಗಳಲ್ಲಿ 30 ರಿಂದ 40 ಸಾಕು ಪ್ರಾಣಿಗಳು ಬಲಿಯಾಗಿವೆ. ಇಲ್ಲಿನ ಗ್ರಾಮಸ್ಥರು ಮನೆಯಿಂದ ಹೊರಹೋಗಬೇಕೆಂದ್ರೆ ಕೈಯಲ್ಲಿ ದೊಣ್ಣೆ, ಪಿಕಾಸಿ ಹಿಡಿದು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಸಾಂದರ್ಭಿಕ ಚಿತ್ರ

ಭೀಮಗಡ್ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ದಾಳಿ ಭೀತಿ:
ಭೀಮಗಡ್ ಅರಣ್ಯ ವ್ಯಾಪ್ತಿಯಲ್ಲಿ ಹೆಮ್ಮಡಗಾ, ಡೇಗಾಂವ, ಪಾಲಿ, ಜಾನಗಾಂವ, ಕೃಷ್ಣಾಪುರ, ಡೋಂಗರಗಾಂವ ಸೇರಿ ಒಟ್ಟು 12 ಗ್ರಾಮಗಳು ಬರುತ್ತವೆ. ಈ ಭೀಮಗಡ್ ಅರಣ್ಯದಲ್ಲಿ ಏಳರಿಂದ ಎಂಟು ಹುಲಿಗಳಿದ್ದು, ಈಗ ಹುಲಿಗಳು ಆಹಾರ ಅರಸಿ ಗ್ರಾಮಗಳತ್ತ ಮುಖ ಮಾಡುತ್ತಿವೆ. ಕಳೆದ ಆರು ತಿಂಗಳಲ್ಲಿ ಮೂವತ್ತರಿಂದ ನಲವತ್ತು ಸಾಕು ಪ್ರಾಣಿಗಳು ಮೃತಪಟ್ಟಿದ್ದು, ಇತ್ತೀಚೆಗೆ ಹೆಮ್ಮಡಗಾ ಗ್ರಾಮದ ಹೊರವಲಯದಲ್ಲಿ ಹುಲಿ ದಾಳಿಗೆ ಎರಡು ಆಕಳುಗಳು ಬಲಿಯಾಗಿವೆ. ಹೀಗಾಗಿ ಹೆಮ್ಮಡಗಾ ಗ್ರಾಮಸ್ಥರು ಜೀವಭಯದಲ್ಲೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಗ್ರಾಮದ ಹೊರವಲಯದಲ್ಲಿ ರೈತರ ಜಮೀನುಗಳಿದ್ದು, ಜಮೀನಿಗೆ ತೆರಳಬೇಕಂದ್ರೆ ಕೈಯಲ್ಲಿ ದೊಣ್ಣೆ, ರಾಡ್, ಪಿಕಾಸಿ ಹಿಡಿದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಗ್ರಾಮದ ಹೊರವಲಯದಲ್ಲಿ ಎತ್ತುಗಳು ಎಮ್ಮೆಗಳು ಮೇಯಲು ಹೋದ ವೇಳೆ ಎಂಟು ದಿವಸಕ್ಕೊಮ್ಮೆ ತಮ್ಮ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. 40 ರಿಂದ 50 ಸಾವಿರ ರೂಪಾಯಿ ಮೌಲ್ಯದ ಆಕಳು ಹುಲಿ ದಾಳಿಗೆ ಬಲಿಯಾದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಪಂಚನಾಮೆ ಮಾಡಿ ಕೇವಲ 10 ಸಾವಿರ ರೂಪಾಯಿಯಷ್ಟು ಪರಿಹಾರ ನೀಡ್ತಾರೆ. ಆ ಪರಿಹಾರಕ್ಕಾಗಿ ಆರು ತಿಂಗಳ ಕಾಲ ಕಾಯಬೇಕು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Tiger Attack | ಹೆಚ್ಚುತ್ತಿದೆ ಹುಲಿ ದಾಳಿ ಭೀತಿ: ಬಲಿಯಾಗುತ್ತಿವೆ ರೈತರ ಸಾಕು ಪ್ರಾಣಿಗಳು

ಮಡಿಕೇರಿ ಭಾಗದ ಜನರಲ್ಲಿ ಹೆಚ್ಚಾಗುತ್ತಿದೆ ಆತಂಕ:
ದಕ್ಷಿಣ ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಹುಲಿ ದಾಳಿ ನಿರಂತರವಾಗಿದೆ. ನಾಗರಹೊಳೆ ಅಭಯಾರಣ್ಯದಿಂದ ಬರುವ ಈ ಹುಲಿಗಳು ಇದುವರೆಗೆ ಜಾನುವಾರುಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದವು. ಆದರೆ ಇತ್ತೀಚೆಗೆ ಹುಲಿಗಳು ಮನುಷ್ಯರ ಮೇಲೆಯೇ ದಾಳಿ ಮಾಡಲಾರಂಭಿಸಿವೆ. ಇದು ಈ ವ್ಯಾಪ್ತಿಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹೀಗಾಗಿ ಈ ಹುಲಿಯನ್ನ ತಕ್ಷಣವೇ ಗುಂಡಿಟ್ಟು ಕೊಲ್ಲುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ 2 ಹಸುಗಳ ಮೇಲೆ ಹುಲಿ ದಾಳಿ ನಡೆಸಿದೆ. ಜೊತೆಗೆ ದಕ್ಷಿಣ ಕೊಡಗಿನಲ್ಲಿ ಕಳೆದ ಎರಡು ತಿಂಗಳಲ್ಲೇ ಹುಲಿ ದಾಳಿಗೆ 20ಕ್ಕೂ ಅಧಿಕ ಜಾನುವಾರುಗಳು ಬಲಿಯಾಗಿವೆ. ಒಂದೆಡೆ ಆನೆದಾಳಿಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಾ ಇದ್ದರೆ, ಇನ್ನೊಂದೆಡೆ ಇದೀಗ ಹುಲಿ ಕೂಡ ಮನುಷ್ಯನ ರಕ್ತದ ರುಚಿ ನೋಡಿರುವುದು ನಿಜಕ್ಕೂ ಆತಂಕಕಾರಿ. ಒಟ್ಟಾರೆ ಭಾಗದ ಜನರು ಕ್ಷಣಕ್ಷಣಕ್ಕೂ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಸುಮಾರು ನಾಲ್ಕಾರು ಹುಲಿಗಳು ಈ ಭಾಗದಲ್ಲಿದ್ದು ಇವುಗಳನ್ನು ಶೀಘ್ರವಾಗಿ ಸರೆಹಿಡಿಯಬೇಕಾಗಿದೆ.

ಇದನ್ನೂ ಓದಿ: ವನ್ಯ ಜೀವಿ-ಮಾನವ ಸಂಘರ್ಷ; ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಹುಲಿ, ಚಿರತೆ ದಾಳಿ