ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಇಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರುನ್ನ ಹುಲಿಯೊಂದು ಭಯಾನಕವಾಗಿ ಬೇಟೆಯಾಡಿದೆ. ಕುಮಟೂರು ಗ್ರಾಮದಲ್ಲಿ 14 ವರ್ಷದ ಬಾಲನೊಬ್ಬನನ್ನ ಹೆಬ್ಬುಲಿ ಕೊಂದು ಹಾಕಿತ್ತು. ಅದಾಗಿ ಕೇವಲ 10 ಗಂಟೆಗಳ ಅವಧಿಯಲ್ಲೇ ಪಕ್ಕದ ಗ್ರಾಮದಲ್ಲೇ ಅದೇ ಹುಲಿ ಕಾರ್ಮಿಕ ಮಹಿಳೆಯಬ್ಬಳನ್ನ ಬಲಿ ಪಡೆದಿದೆ. ಎರಡೂ ಪ್ರಕರಣಗಳಲ್ಲಿ ಈ ಚಂಡ ವ್ಯಾಘ್ರ ಮನುಷ್ಯರ ತಲೆಯನ್ನೇ ಘಾಸಿಗೊಳಿಸಿ ಮಿದುಳನ್ನ ಕಿತ್ತಿದೆ. ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಶಾಲೆಗೆ ತೆರಳ್ತಿದ್ದಾಗ ಹುಲಿ ನೋಡಿ ಯುವತಿ ಪ್ರಜ್ಞೆತಪ್ಪಿ ಬಿದ್ದ ಘಟನೆಯೂ ನಡೆದಿದೆ. ಬಾಲಕಿಗೆ ಗೋಣಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಷ್ಟೇ ಅಲ್ಲ ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ಹುಲಿಯೊಂದು ಕೊಂದು ಹಾಕಿದೆ.
ಜನರಲ್ಲಿ ಹೆಚ್ಚಾಗುತ್ತಿದೆ ಆತಂಕ
ದಕ್ಷಿಣ ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಹುಲಿ ದಾಳಿ ನಿರಂತರವಾಗಿದೆ. ನಾಗರಹೊಳೆ ಅಭಯಾರಣ್ಯದಿಂದ ಬರೋ ಈ ಹುಲಿಗಳು ಇದುವರೆಗೆ ಜಾನುವಾರುಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದವು. ಆದ್ರೆ ಇದೀಗ ಹುಲಿಗಳು ಮನುಷ್ಯರ ಮೇಲೆಯೇ ದಾಳಿ ಮಾಡಲಾರಂಭಿಸಿವೆ. ಇದು ಈ ವ್ಯಾಪ್ತಿಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಾಗಾಗಿ ಈ ಹುಲಿಯನ್ನ ತಕ್ಷಣವೇ ಗುಂಡಿಟ್ಟು ಕೊಲ್ಲುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ 2 ಹಸುಗಳ ಮೇಲೆ ಹುಲಿ ದಾಳಿ ನಡೆಸಿದೆ. ಜೊತೆಗೆ ದಕ್ಷಿಣ ಕೊಡಗಿನಲ್ಲಿ ಕಳೆದ ಎರಡು ತಿಂಗಳಲ್ಲೇ ಹುಲಿ ದಾಳಿಗೆ 20ಕ್ಕೂ ಅಧಿಕ ಜಾನುವಾರುಗಳು ಬಲಿಯಾಗಿವೆ. ಒಂದೆಡೆ ಆನೆದಾಳಿಯಿಂದ ಜನ್ರು ಪ್ರಾಣ ಕಳೆದುಕೊಳ್ತಾ ಇದ್ರೆ, ಇದೀಗ ಹುಲಿ ಕೂಡ ಮನುಷ್ಯನ ರಕ್ತದ ರುಚಿ ನೋಡಿರೋದು ನಿಜಕ್ಕೂ ಆತಂಕಕಾರಿ. ಈ ಭಾಗದ ಜನ್ರು ಕ್ಷಣಕ್ಷಣಕ್ಕೂ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಸುಮಾರು ನಾಲ್ಕಾರು ಹುಲಿಗಳು ಈ ಭಾಗದಲ್ಲಿದ್ದು ಇವುಗಳನ್ನು ಶೀಘ್ರವಾಗಿ ಸರೆಹಿಡಿಯಬೇಕಾಗಿದೆ.
ಒಂದು ಹುಲಿ ಸೆರೆ
ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ 5 ಸಾಕಾನೆಗಳನ್ನು ಬಳಸಿ ಟಿ.ಶೆಟ್ಟಿಗೇರಿ, ಮಂಚಳ್ಳಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ್ದು ನಿನ್ನೆ (ಫೆ. 21) ಒಂದು ಹುಲಿ ಸೆರೆ ಹಿಡಿಯಲಾಗಿದೆ. ಈ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಇರುವ ಸಾಧ್ಯತೆ ಇದ್ದು ಎರಡು ಪ್ರದೇಶಗಳಲ್ಲಿ ಬೋನ್ ಅಳವಡಿಸಲಾಗಿದೆ. 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ.
ತಾಯಿ, ಮಗನ ಮೇಲೆ ಚಿರತೆ ದಾಳಿ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿಯ ಬೋವಿ ಕಾಲೋನಿಯಲ್ಲಿ ಜಮೀನಿಗೆ ತೆರಳುತ್ತಿದ್ದ ತಾಯಿ, ಮಗನ ಮೇಲೆ ಚಿರತೆ ದಾಳಿ ನಡೆಸಿದೆ. ಗಾಯಾಳುಗಳಾದ ಚಂದ್ರಮ್ಮ, ಕಿರಣ್‌ಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಗಲು ವೇಳೆಯೇ ಕಾಣಿಸಿಕೊಳ್ಳುತ್ತಿರುವ ಎರಡು ಚಿರತೆಗಳಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.
ಹುಲಿ ಹಿಡಿಯಲು ಸಿದ್ದತೆ ಕುರಿತು ಚರ್ಚಿಸುತ್ತಿರುವ ಸಿಬ್ಬಂದಿ
ಹುಲಿ ಸೆರೆ ಹಿಡಿಯಲು ಬೋನ್ ಅಳವಡಿಸುತ್ತಿರುವ ಸಿಬ್ಬಂದಿ
ಹುಲಿ ಸೆರೆ ಹಿಡಿಯಲು ಸಿದ್ದವಾಗಿರುವ ಬೋನ್
ಇದನ್ನೂ ಓದಿ: Tiger Attack | ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ, ಕಾರ್ಯಾಚರಣೆಗೆ ಸಾಕಾನೆಗಳನ್ನು ಕರೆಸಿದ ಅರಣ್ಯ ಇಲಾಖೆ