ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ: ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದವ ಬೀದಿ ಹೆಣವಾದ

ಆತ ಅನ್ಯಾಯದ ವಿರುದ್ದ ನಿಂತಿದ್ದ. ಮೀಟರ್ ಬಡ್ಡಿ ದಂಧೆ, ಅಕ್ರಮ ಹಣ ವಸೂಲಿ ದಂಧೆ ನಿಲ್ಲಿಸಲು ಪಣ ತೊಟ್ಟಿದ್ದು. ಆತನ ಈ‌ ನಿಲುವು ಆತನಿಗೆ ಮುಳುವಾಗಿದೆ. ಅನ್ಯಾಯ ತಡೆಯಲು ಪೊಲೀಸರ ಮೊರೆ ಹೋದವನು ಇದೀಗ ನಡು ಬೀದಿಯಲ್ಲಿ‌ ಕೊಲೆಯಾಗಿದ್ದಾನೆ. ಇದರಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ: ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದವ  ಬೀದಿ ಹೆಣವಾದ
Shahbaz
Edited By:

Updated on: Jan 20, 2026 | 8:33 PM

ಬೆಂಗಳೂರು, ಜನವರಿ 20): ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ (Mysuru) ನಿನ್ನೆ(ಜನವರಿ 19) ಮಧ್ಯರಾತ್ರಿ ಮತ್ತೊಂದು ಕೊಲೆಯಾಗಿದೆ (Murder). ಅಂಗಡಿ ಮುಂದೆ ಕುಳಿತಿದ್ದ ಯುವಕನನ್ನು ಚಾಕು, ಲಾಂಗುಗಳನ್ನು ಹಿಡಿದು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೈಸೂರು ಉದಯಗಿರಿ ಬೀಡಿ ಕಾಲೋನಿ ಬಳಿ 26 ವರ್ಷದ ಶಹಬಾಜ ಎಂಬ ಯುವಕನನ್ನು ಅದೇ ಏರಿಯಾದ ಜುಬೇರ್ ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಫೈನಾನ್ಸ್ ಹಾವಳಿ ತಡೆಯಲು ಮುಂದಾಗಿದ್ದೆ ಶಹಬಾಜ್ ಕೊಲೆ ಕಾರಣ ಎನ್ನಲಾಗಿದೆ.

ರಾತ್ರಿ‌1 ಗಂಟೆ ವೇಳೆ ಅಂಗಡಿ ಮುಚ್ಚಿ ಕುಳಿತಿದ್ದ ಶಹಬಾಜ್ ಮೇಲೆ ಏಕಾಏಕಿ ದಾಳಿ ಮಾಡಿ ತಲೆ, ಎದೆ, ಕತ್ತು, ಹೊಟ್ಟೆಗೆ ಹೀಗೆ ಸಿಕ್ಕ ಸಿಕ್ಕ ಕಡೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೆ ವೈಷಮ್ಯದಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.

ಇದನ್ನೂ ಓದಿ: ಭದ್ರಾವತಿಯಲ್ಲಿ ವೃದ್ಧ ದಂಪತಿ ಅನುಮಾನಸ್ಪದ ಸಾವು: ಸ್ಥಳಕ್ಕೆ ವಿಧಿವಿಜ್ಞಾನ ತಂಡ, ಶ್ವಾನ ದಳ ದೌಡು

ಕೊಲೆಯಾದ ಯುವಕ ಹಾಗೂ ಕೊಲೆ ಮಾಡಿದ ಆರೋಪಿಗಳು ಒಂದೇ ಏರಿಯಾದವರು. ಶಹಬಾಜ್ ಗೌಸಿಯಾ ನಗರದಲ್ಲಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡಿದ್ದ. ಏರಿಯಾದಲ್ಲಿ ಫೈನಾನ್ಸ್ ಹಾವಳಿ ಜಾಸ್ತಿಯಾಗಿತ್ತು. ಜುಬೇರ್ ಹಾಗೂ ಅತನ ಸ್ಮೇಹಿತರು ಫೈನ್ಯಾನ್ಸ್ ಹೆಸರಿನಲ್ಲಿ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದರಂತೆ. ಅವರ ವಿರುದ್ಧ ಶಹಬಾನ್‌ ನಿಂತಿದ್ದ. ಪೊಲೀಸರಿಗೆ ದೂರು ಸಹ ಕೊಡಿಸಿದ್ದನಂತೆ. ಇದೇ ಕಾರಣಕ್ಕೆ ನಾಲ್ಕು ತಿಂಗಳ ಹಿಂದೆ ಶಹಬಾಜ್ ಅಂಗಡಿ ಮುಂದೆ ಇವರು ಬಂದು ಗಲಾಟೆ ಮಾಡಿದ್ದರು.

ಇನ್ನು ಒದರ ಜೊತೆಗೆ ಶಹಬಾಜ್ ಮನೆ ಪಕ್ಕ ಖಾಲಿ ಜಾಗದಲ್ಲಿ ಆಟೋಗಳನ್ನು ನಿಲ್ಲಿಸುತ್ತಿದ್ದರು. ಒಂದು ಆಟೋಕ್ಕೆ ದಿನಕ್ಕೆ 20 ರೂಪಾಯಿ ಕಲೆಕ್ಟ್ ಮಾಡಲಾಗುತಿತ್ತು. ಈ ವಿಚಾರಕ್ಕೂ ಗಲಾಟೆ ಆಗಿತ್ತಂತೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಮೈಸೂರಿನ ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.