
ಮೈಸೂರು, ಡಿಸೆಂಬರ್ 23: ಮೈಸೂರು (Mysuru) ಜಿಲ್ಲೆಯಲ್ಲಿ ಮಾವನ-ಕಾಡು ಪ್ರಾಣಿ ಸಂಘರ್ಷ ಇತ್ತೀಚೆಗೆ ಹೆಚ್ಚಾಗಿದ್ದು, ನಾಗರಹೊಳೆ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಕಾಡಾನೆ (Wild Elephant) ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಕಾಡಾನೆ ಹಾವಳಿ ತಡೆಯಲು ಅರಣ್ಯ ಇಲಾಖೆ ವಿನೂತನ ವಿಧಾನವೊಂದನ್ನು ಕಂಡುಕೊಂಡಿದ್ದು, ಬಹುತೇಕ ಯಶಸ್ವಿಯಾಗಿದೆ. ನಾಗರಹೊಳೆ ಅರಣ್ಯ ಗಡಿಗಳಲ್ಲಿ ಕಾಡಾನೆಗಳನ್ನು ಓಡಿಸಲು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಕ್ಯಾಮರಾಗಳನ್ನು ಧ್ವನಿವರ್ಧಕಗಳ ಜತೆ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಕಾಡಾನೆಗಳು ಸುಮಾರು 150 ಮೀಟರ್ ದೂರದಲ್ಲಿದ್ದಾಗಲೇ ಅವುಗಳನ್ನು ಗುರುತಿಸಿ, ಜೋರಾಗಿ ಶಬ್ದಗಳನ್ನು ಮಾಡುವ ಮೂಲಕ ಅವುಗಳನ್ನು ಓಡಿಸುತ್ತಿವೆ.
ಈ ಎಐ ಕ್ಯಾಮರಾಗಳಲ್ಲಿ 20ಕ್ಕೂ ಹೆಚ್ಚು ವಿಭಿನ್ನ ರೀತಿಯ ಶಬ್ದಗಳಿವೆ. ಜೇನು ನೊಣಗಳ ಗದ್ದಲ, ಪಟಾಕಿ ಸದ್ದು ಸೇರಿದಂತೆ ವಿವಿಧ ಶಬ್ದಗಳನ್ನು ಹೊರಡಿಸುವ ಮೂಲಕ ಕಾಡಾನೆಗಳನ್ನು ಭಯಪಡಿಸಿ ತೋಟ ಹಾಗೂ ಬೆಳೆ ಪ್ರದೇಶಗಳತ್ತ ಬರದಂತೆ ತಡೆಯಲಾಗುತ್ತಿದೆ. ತೋಟದ ಕಾವಲುಗಾರನಂತೆ ಕೆಲಸ ಮಾಡುವ ಈ ಕ್ಯಾಮರಾಗಳು ಕಾಡಾನೆ ಕಣ್ಣಿಗೆ ಬಿದ್ದೊಡನೆ ತಕ್ಷಣ ಸಕ್ರಿಯಗೊಳ್ಳುತ್ತವೆ.
ಎಐ ಕ್ಯಾಮರಾ ಅಳವಡಿಕೆಯ ಬಳಿಕ ಕಾಡಾನೆಗಳ ಹಾವಳಿ ಗಣನೀಯವಾಗಿ ತಗ್ಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಬೆಳೆ ನಾಶವನ್ನು ತಡೆಯುವಲ್ಲಿ ಈ ‘ಕೂಗು ಕ್ಯಾಮರಾ’ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಕಾಡಾನೆಗಳು ಓಡುವ ದೃಶ್ಯಗಳು ಸಿಸಿ ಕ್ಯಾಮರದಲ್ಲೂ ಸೆರೆಯಾಗಿದ್ದು, ಈ ತಂತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ.
ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಿರುವ ಇತರೆ ಅರಣ್ಯ ಗಡಿ ಪ್ರದೇಶಗಳಲ್ಲೂ ಇದೇ ರೀತಿಯ ಎಐ ಕ್ಯಾಮರಾಗಳನ್ನು ಅಳವಡಿಸಲು ಅರಣ್ಯ ಇಲಾಖೆ ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ: ಕಾಡಾನೆಗಳ ಕೆಣಕಿದ ಯುವಕರು, ರೊಚ್ಚಿಗೆದ್ದ ಗಜರಾಜ!
ಕರ್ನಾಟಕದಲ್ಲಿ ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಹಚ್ಚಾಗಿದ್ದು, ಅದರಲ್ಲೂ ಕಾಡಾನೆ ದಾಳಿಗೆ ಬಲಿಯಾದವರ ಸಂಖ್ಯೆ ಹೆಚ್ಚಾಗಿದೆ. ಮೈಸೂರು ಜಿಲ್ಲೆಯೂ ಮುಂಚೂಣಿಯಲ್ಲಿದೆ. ಅರಣ್ಯ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, 2022 ರಿಂದ 2025 ರವರೆಗೆ ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷದಿಂದ ಮೈಸೂರು ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಹೀಗಾಗಿ, ಅರಣ್ಯ ಇಲಾಖೆಯ ಎಐ ಕ್ಯಾಮರಾ ತಂತ್ರ ಸದ್ಯ ರೈತರು, ಕಾಡಂಚಿನ ಪ್ರದೇಶದ ಜನರಿಗೆ ಭರವಸೆಯಾಗಿ ಕಾಣಿಸಿದೆ.