ಖ್ಯಾತ ಯೋಗ ಗುರು ಶರತ್ ಜೋಯಿಸ್ ನಿಧನ

|

Updated on: Nov 12, 2024 | 2:44 PM

ಮೈಸೂರಿನ ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ, ಖ್ಯಾತ ಯೋಗ ಗುರು ಶರತ್ ಜೋಯಿಸ್ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ಮೂಲತಃ ಮೈಸೂರಿನವರಾದ ಶರತ್ ಜೋಯಿಸ್ ಅವರು, ಅಮೆರಿಕಾದಲ್ಲಿ ಯೋಗ ಹೇಳಿಕೊಡುತ್ತಿದ್ದರು.

ಖ್ಯಾತ ಯೋಗ ಗುರು ಶರತ್ ಜೋಯಿಸ್ ನಿಧನ
ಖ್ಯಾತ ಯೋಗ ಗುರು ಶರತ್​ ಜೋಯಿಸ್
Follow us on

ಮೈಸೂರು, ನವೆಂಬರ್​ 12: ಅಷ್ಟಾಂಗ ಯೋಗ (Astanga Yoga) ಗುರು ಶರತ್ ಜೋಯಿಸ್ (R. Sharath Jois) ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರು ಅಮೇರಿಕಾದ ವರ್ಜೀನಿಯಾದಲ್ಲಿ ಯೋಗ ಗುರುವಾಗಿ ನೆಲೆಸಿದ್ದರು. ಶರತ್ ಜೋಯಿಸ್ ಅವರು ಅಜ್ಜ ಕೆ.ಪಟ್ಟಾಭಿ ಜೋಯಿಸ್ ಅವರಂತೆ ಯೋಗ ಶಾಲೆ ನಡೆಸುತ್ತಿದ್ದರು. ಮೈಸೂರಿನಲ್ಲಿ ಇವರದ್ದೇಯಾದ ಯೋಗ ಕೇಂದ್ರವಿದೆ.

ಶರತ್ ಜೋಯಿಸ್ ಅವರು ಮೈಸೂರಿನ ಗೋಕುಲಂನಲ್ಲಿ ವಾಸವಾಗಿದ್ದರು. ಶರತ್ ಜೋಯಿಸ್ ಅವರು ದೇಶ ಹಾಗೂ ವಿದೇಶಗಳಲ್ಲೂ ಯೋಗ ತರಗತಿಗಳನ್ನು ನಡೆಸುತ್ತಿದ್ದರು. ಶರತ್ ಜೋಯಿಸ್ ಅವರು ಅಷ್ಟಾಂಗ ಯೋಗದ ಅಭ್ಯಾಸವನ್ನು ಜಗತ್ತಿನಾದ್ಯಂತ ಕಲಿಸಲು ಮತ್ತು ಹರಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.

ಶರತ್​ ಅವರು ಸೆಪ್ಟೆಂಬರ್ 29, 1971 ರಂದು ಮೈಸೂರಿನಲ್ಲಿ ಸರಸ್ವತಿ (ಪಟ್ಟಾಭಿ ಜೋಯಿಸ್ ಅವರ ಪುತ್ರಿ) ಮತ್ತು ರಂಗಸ್ವಾಮಿ ದಂಪತಿಯ ಮಗನಾಗಿ ಜನಿಸಿದರು. ಶರತ್​ ಅವರು ಚಿಕ್ಕ ವಯಸ್ಸಿನಿಂದಲೂ ಯೋಗದಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು.

ತಮ್ಮ ಏಳನೇ ವಯಸ್ಸಿನಲ್ಲೇ ಯೋಗ ಕಲಿಯಲು ಆರಂಭಿಸಿದರು. ತಮ್ಮ ಅಜ್ಜನ ಮಾರ್ಗದರ್ಶನದಲ್ಲಿ ಪ್ರಾಥಮಿಕ ಮತ್ತು ಮಧ್ಯಂತರ ಯೋಗಾಸನಗಳನ್ನು ಕಲಿತರು. ಶರತ್​ ಅವರು ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು.

ಶರತ್ ಅವರು ಪ್ರತಿದಿನ ಬೆಳಿಗ್ಗೆ 330 ಕ್ಕೆ ಲಕ್ಷ್ಮಿಪುರಂ ಯೋಗ ಶಾಲೆಯಲ್ಲಿ ಮತ್ತು ನಂತರ ಗೋಕುಲಂನಲ್ಲಿ ತಮ್ಮ ಅಜ್ಜನಿಗೆ ಸಹಾಯ ಮಾಡುತ್ತಾ, ಯೋಗ ಕಲಿಯುತ್ತಿದ್ದರು.

ಗಣ್ಯರ ಸಂತಾಪ

ಖ್ಯಾತ ಯೋಗ ಗುರು ಶರತ್ ಜೋಯಿಸ್ ರವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್​​ ಸಿಂಹ ಟ್ವೀಟ್​ ಮಾಡಿದ್ದಾರೆ.​

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:43 pm, Tue, 12 November 24