ಅಳೆದೂ ತೂಗಿ ಯಾವುದೇ ಭಿನ್ನಮತ ಹೊಮ್ಮದಿರುವಂತೆ ಮತ್ತು ಪ್ರಾದೇಶಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಸಂಪುಟ ರಚನೆ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್ ಪ್ರಯತ್ನ ವಿಫಲವಾಗಿದೆ. ರಾಜ್ಯದ ಮೈಸೂರು ಪ್ರಾಂತ್ಯದ ಐದು ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆಗೊಂದೇ ಸಚಿವ ಸ್ಥಾನ ನೀಡಲಾಗಿದೆ. ಮಂಡ್ಯದ ಕೆ.ಸಿ.ನಾರಾಯಣಗೌಡಗೆ ಮತ್ತೆ ಅವಕಾಶ ದೊರೆತಿದೆ. ಆದರೆ ಮೈಸೂರು, ಕೊಡಗು, ಹಾಸನ , ಚಾಮರಾಜನಗರ ಜಿಲ್ಲೆಗಳ ಯಾವುದೇ ನಾಯಕರಿಗೆ ಈಬಾರಿ ಸಚಿವ ಸ್ಥಾನ ದೊರೆತಿಲ್ಲ.
ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿಯೂ ಮೈಸೂರು ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆತಿರಲಿಲ್ಲ. ಈ ಸಲವಾದರೂ ಜಿಲ್ಲೆಯ ಓರ್ವ ನಾಯಕನಾದರೂ ಸಚಿವರಾಗುತ್ತಾರೆ ಎಂಬ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ. ಕೃಷ್ಣರಾಜ ಕ್ಷೇತ್ರದ ಶಾಸಕ,ಐದು ಬಾರಿ ವಿಧಾನಸಭೆಗೆ ಆರಿಸಿಹೋದ ರಾಮದಾಸ್, ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅಥವಾ ಚಾಮರಾಜ ಕ್ಷೇತ್ರದ ಶಾಸಕ ಎಲ್ . ನಾಗೇಂದ್ರ- ಈ ಮೂರರಲ್ಲಿ ಒಬ್ಬರಿಗೆ ಮಂತ್ರಿಗಿರಿ ಪಕ್ಕಾ ಎನ್ನಲಾಗಿತ್ತು. ಇಲ್ಲ, ಇದು ನಿಜವಾಗಿಲ್ಲ.
ಮೈಸೂರು ಪ್ರಾಂತ್ಯದ ನಾಯಕರಿಗೆ ಸಚಿವ ಸ್ಥಾನ ನೀಡುವುದು ಬಿಜೆಪಿಯನ್ನು ಆ ಭಾಗದಲ್ಲಿ ಆಳವಾಗಿ ಬೇರೂರಿಸುವ ಒಂದು ಭಾಗವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಗಟ್ಟಿಯಾಗಿರುವ ಬಿಜೆಪಿಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಭಾವದಿಂದಾಗಿ ಕಾಂಗ್ರೆಸ್ ಕುರಿತು ಕೊಂಚ ಭಯವಿದೆ. ಪ್ರತಿ ಸಂಪುಟ ರಚನೆ, ಪುನರಚನೆಯಲ್ಲಿ ಮೈಸೂರು ಭಾಗದ ನಾಯಕರಿಗೆ ಮಣೆ ಹಾಕಿ ಭಯವನ್ನು ಸ್ವಲ್ಪಸ್ವಲ್ಪವೇ ತೊಳೆದುಹಾಕುವ ಅವಕಾಶವನ್ನು ಬಿಜೆಪಿ ಕೈಚೆಲ್ಲಿದೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಬೋಪಯ್ಯ, ಹಾಸನದ ಪ್ರೀತಂ ಗೌಡ ಇವರೆಲ್ಲರ ನಿರೀಕ್ಷೆ ಸುಳ್ಳಾಗಿದೆ. ಬಿಜೆಪಿ ಹೈಕಮಾಂಡ್ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರೊಬ್ಬರನ್ನೇ ಈ ಭಾಗದಲ್ಲಿ ನೆಚ್ಚಿಕೊಂಡಿರಬಹುದೇ ಎಂಬ ಪ್ರಶ್ನೆಯೂ ಮೂಡಿದೆ. ಆದರೆ ಹಾಗೇನಾದರೂ ಆದಲ್ಲಿ ಅವರೊಬ್ಬರೇ ಬಿಜೆಪಿ ಬಲವರ್ಧನೆಗೆ ಸಾಕಾಗದು ಎಂಬದಂತೂ ಖರೆ.
ಇದನ್ನೂ ಓದಿ:
ಬಿಜೆಪಿ ಭ್ರಷ್ಟ ಪಕ್ಷ, ಬಿಜೆಪಿಯದ್ದು ಭ್ರಷ್ಟ ಸರ್ಕಾರ: ಮಾಜಿ ಸಿಎಂ ಸಿದ್ದರಾಮಯ್ಯ
ಕದ್ರಾ ತಾಲೂಕಿನ ಪ್ರವಾಹ ಪೀಡಿದ ಜನರ ಸಮಸ್ಯೆಗಳನ್ನು ಅಲಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ