ದೆಹಲಿ ಪೊಲೀಸರ ಕಾರ್ಯಾಚರಣೆ: ಶಾಲೆಗಳು, ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್

ಅಪರಾಧ ಕೃತ್ಯಗಳನ್ನೆಸಗುವವರಿಗೆ ಮೈಸೂರು ಸುರಕ್ಷಿತ ತಾಣವಾಗುತ್ತಿದೆಯಾ? ಇಂಥದ್ದೊಂದು ಅನುಮಾನ ಇದೀಗ ಬಲವಾಗಲು ಕಾರಣವಿದೆ. ಈ ಹಿಂದೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿ ದೊಡ್ಡ ಡ್ರಗ್ಸ್ ಜಾಲ ಬಯಲಿಗೆಳೆದಿದ್ದರು. ಆವರೆಗೆ ಸ್ಥಳೀಯ ಪೊಲೀಸರಿಗೆ ಅದರ ಸುಳಿವೂ ಇರಲಿಲ್ಲ. ಇದೀಗ ಶಾಲೆ, ಕೋರ್ಟ್, ಸರ್ಕಾರಿ ಕಚೇರಿಗಳಿಗೆ ನಿರಂತರ ಬಾಂಬ್ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಆಸಾಮಿಯನ್ನು ದೆಹಲಿ ಪೊಲೀಸರು ಮೈಸೂರಿನ ಪ್ರತಿಷ್ಠಿತ ಬಡಾವಣೆಯ ಮನೆಯೊಂದರಿಂದ ಬಂಧಿಸಿದ್ದಾರೆ.

ದೆಹಲಿ ಪೊಲೀಸರ ಕಾರ್ಯಾಚರಣೆ: ಶಾಲೆಗಳು, ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್
ಬಾಂಬ್ ಬೆದರಿಕೆಯ ಸಾಂದರ್ಭಿಕ ಚಿತ್ರ ಹಾಗೂ ಆರೋಪಿ ಶ್ರೀನಿವಾಸ್
Image Credit source: tv9
Edited By:

Updated on: Mar 28, 2026 | 11:50 AM

ಮೈಸೂರು, ಮಾರ್ಚ್ 28: ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಕಳೆದ ಕೆಲವು ದಿನಗಳಿಂದ ಬೆದರಿಕೆ (Bomb Threat) ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರ (Delhi Police) ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ. ಮೈಸೂರು (Mysuru) ನಗರದಲ್ಲಿ ಅಡಗಿ ಕುಳಿತಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದ್ದು, ದೆಹಲಿ ಪೊಲೀಸರ ತಂಡ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಿದೆ. ಆರೋಪಿಯು ಒಂದೇ ತಿಂಗಳಲ್ಲಿ ಅನೇಕ ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಎಂಬುದು ತಿಳಿದುಬಂದಿದೆ.

ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲೇ ಇದ್ದ ಆರೋಪಿ!

ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಆರೋಪಿಯು ಅಡಗಿ ಕುಳಿತಿದ್ದ. ಈ ಕುರಿತು ಮಾಹಿತಿ ಪಡೆದ ದೆಹಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಸ್ಥಳೀಯ ವಿವಿ ಪುರಂ ಪೊಲೀಸ್ ಠಾಣೆಯ ಸಹಕಾರದಿಂದ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧನದ ವೇಳೆ ಆರೋಪಿಯ ಮನೆಯಲ್ಲಿ ಹಲವು ಸಿಮ್ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು.

ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲಾಗುತ್ತಿದ್ದು, ಈ ಹಿಂದೆ ಕಳುಹಿಸಿದ ಎಲ್ಲಾ ಬೆದರಿಕೆ ಸಂದೇಶಗಳ ಹಿನ್ನಲೆ ಹಾಗೂ ಉದ್ದೇಶಗಳ ಬಗ್ಗೆ ವಿಚಾರಣೆ ಮುಂದುವರಿಯಲಿದೆ.

ಈ ಹಿಂದೆ ಮೈಸೂರಿನಲ್ಲಿ ದೊಡ್ಡ ಡ್ರಗ್ಸ್ ತಯಾರಿಕಾ ಮತ್ತು ಪೂರೈಕೆ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಬಯಲಿಗೆಳೆದಿದ್ದರು. ಅದಾದ ನಂತರವೂ ಮೈಸೂರಿನಲ್ಲಿ ಅನೇಕ ಡ್ರಗ್ಸ್ ಪ್ರಕರಣಗಳು ಬಯಲಿಗೆ ಬಂದಿವೆ. ಇದೀಗ ಬಾಂಬ್ ಬೆದರಿಕೆ ಸಂದೇಶಗಳ ಆರೋಪಿ ಸಹ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಅಡಗಿ ಇದ್ದುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ: ವಿಧಾನಸಭಾ ಸ್ಪೀಕರ್​ಗೆ ಬಾಂಬ್ ಬೆದರಿಕೆ, ಮೆಟ್ರೋ ನಿಲ್ದಾಣವನ್ನೂ ಸ್ಫೋಟಿಸುವುದಾಗಿ ಬಂತು ಇ-ಮೇಲ್

ಒಟ್ಟಿನಲ್ಲಿ, ಮೈಸೂರಿನಲ್ಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಆತಂಕ ಸೃಷ್ಟಿಸಿದ್ದ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ದೆಹಲಿ ಪೊಲೀಸರು ತೆರೆ ಎಳೆದಿದ್ದು, ಆರೋಪಿಯ ಬಂಧನದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Sat, 28 March 26

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us