ಮೈಸೂರು: ಗೋವಾ ಅಂದ್ರೆ ಬರೀ ಬೀಚ್ ಬಾರ್ ಪಬ್ ಕ್ಯಾಸಿನೊಗಳು ಅಂತಾನೇ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ಗೋವಾ ಅಂದ್ರೆ ಅಷ್ಟೇ ಅಲ್ಲ ಇಲ್ಲಿ ಕಲೆ ಸಂಸ್ಕೃತಿ ಇದೆ. ಆಕರ್ಷಕ ಪ್ರವಾಸಿ ತಾಣಗಳಿವೆ ಅಂತಾ ಜಗತ್ತಿಗೆ ವಿಭಿನ್ನವಾಗಿ ಸಾರಲು ಗೋವಾ ಮುಂದಾಗಿದೆ. ತಲೆಯ ಮೇಲೆ ದೀಪ ಇಟ್ಟು ನೃತ್ಯ ಮಾಡುತ್ತಿರುವ (dance culture) ಯುವಕ ಯುವತಿಯರು. ಗೋವಾದ ಪಾಪ್ ಸಾಂಗ್ ಹಾಡು ರಂಜಿಸುತ್ತಿರುವ ಹಾಡುಗಾರ. ಸೆಲ್ಫಿಗೆ ಪೋಸ್ ನೀಡುತ್ತಿರುವ ವಿಭಿನ್ನ ವೇಷಧಾರಿ… ಇವರೆಲ್ಲಾ ಗೋವಾದ ಕಲಾವಿದರು. ಇವರೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿಗೆ (mysore) ಆಗಮಿಸಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹೌದು ಗೋವಾ ರಾಜ್ಯ ಪೋರ್ಚಗೀಸರಿಂದ ಸ್ವಾತಂತ್ರ್ಯಗೊಂಡು 60 ವರ್ಷವಾಗಿದೆ Goa@60. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ (Goa government) ದೇಶದಾದ್ಯಂತ ಸಂಭ್ರಮಾಚರಣೆ ಮಾಡುತ್ತಿದೆ. ಇದರ ಜೊತೆಗೆ ಗೋವಾದ ಪ್ರವಾಸೋದ್ಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಗೋವಾದಿಂದ 15 ಜನ ಕಲಾವಿದರು ಮೈಸೂರಿಗೆ ಬಂದಿದ್ದಾರೆ. ಮೈಸೂರಿನ ಪ್ರವಾಸಿ ತಾಣ ಮಾಲ್ ಸೇರಿ ಹಲವು ಕಡೆ ಗೋವಾದ ಸಂಸ್ಕೃತಿ ಕಲೆಯ ಪರಿಚಯ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಆಕರ್ಷಕ ದೀಪದ ನೃತ್ಯ ಸೇರಿ ಹಲವು ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಗೋವಾದ ಸಾಂಪ್ರದಾಯಿಕ ತಿನಿಸುಗಳು, ಗೋವಾದ ಪ್ರವಾಸಿ ತಾಣಗಳ ಬಗ್ಗೆಯೂ ಪರಿಚಯ ಮಾಡಿಕೊಡುತ್ತಿದ್ದಾರೆ. ಇದು ಸಹಜವಾಗಿ ಮೈಸೂರಿಗರಿಗೆ ಖುಷಿ ಕೊಟ್ಟಿದೆ.
ಮೂರು ದಿನ ಗೋವಾ ಕಲಾವಿದರು ತಮ್ಮ ರಾಜ್ಯದ ಪರಿಚಯ ಮಾಡಿಕೊಡಲಿದ್ದಾರೆ. ಗೋವಾಗೆ ಬನ್ನಿ ನಮ್ಮ ಆತಿಥ್ಯ ಸ್ವೀಕರಿಸಿ ಅಂತಾ ಮನವಿ ಮಾಡುತ್ತಿದ್ದಾರೆ. ಒಟ್ಟಾರೆ ಗೋವಾ ಕಲಾವಿದರ ಈ ಆಕರ್ಷಕ ನೃತ್ಯ ಎಲ್ಲರ ಗಮನಸೆಳೆಯುತ್ತಿದೆ. (ವರದಿ: ರಾಮ್, ಟಿವಿ 9, ಮೈಸೂರು)