ಮೈಸೂರು: ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ವಿಚಾರಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ (Pratap Simha) ಹೆಚ್.ವಿಶ್ವನಾಥ್ (H Vishwanath) ಟಾಂಗ್ ಕೊಟ್ಟಿದ್ದಾರೆ. ಇದು ಸಂಸದ ಪ್ರತಾಪ್ ಸಿಂಹ ಸಾಧನೆ ಅಲ್ಲವೆಂದು ಕಿಡಿಕಾರಿದ ಹೆಚ್.ವಿಶ್ವನಾಥ್, ಈ ಹಿಂದಿನ ಸಂಸದ, ಯುಪಿಎ ಸರ್ಕಾರ, ಸಿದ್ದರಾಮಯ್ಯನವರ ಸಾಧನೆ ಎಂದು ಹೇಳಿದ್ದಾರೆ. ಈ ಯೋಜನೆ ನಾನೇ ತಂದೆ ಎಂದು ಹೇಳುವುದು ಸರಿಯಲ್ಲ. ಸಂಸದ ಪ್ರತಾಪ್ ಸಿಂಹ ಹೇಳಿಕೆ ಸರಿಯಲ್ಲ. ಮಂಡ್ಯ ಸಂಸದೆ ಸುಮಲತಾ ಹೇಳಿರುವುದು ಸರಿಯಾಗಿದೆ. ಪ್ರತಾಪ್ ಸಿಂಹ ಎಷ್ಟು ದಿನ ಅಂತ ಸುಳ್ಳು ಹೇಳುತ್ತೀರಿ? ನಾನು, ಆರ್.ಧ್ರುವನಾರಾಯಣ, ರಮ್ಯಾ ಸಂಸದರಾಗಿದ್ದೆವು. ಆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿದೆ. ಈಗ ನೀವೇನಾದರೂ ಹೊಸದಾಗಿ ತಂದಿದ್ದರೆ ನನಗೆ ಹೇಳಿ ಅಂತ ಪ್ರತಾಪ್ ಸಿಂಹಗೆ ಎಂಎಲ್ಸಿ ಹೆಚ್.ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.
ಇನ್ನು ಉಂಡುವಾಡಿ ಕುಡಿಯುವ ನೀರು ಯೋಜನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್, ಈ ಯೋಜನೆ ಶಾಸಕ ಜಿ.ಟಿ.ದೇವೇಗೌಡ ಸಾಧನೆ ಅಲ್ಲ. ಉಂಡುವಾಡಿ ಯೋಜನೆ ತಂದಿದ್ದು ನಾನು. ಯೋಜನೆ ತಂದಾಗ ನೀವು ಎಲ್ಲಿದ್ರಿ ಮಿಸ್ಟರ್ ಜಿ.ಟಿ.ದೇವೇಗೌಡ ಅಂತ ಪ್ರಶ್ನಿಸಿದ್ದಾರೆ
ಬಿಜೆಪಿ ಜನಾಶೀರ್ವಾದ ಯಾತ್ರೆಗೆ ವಿರೋಧ ವ್ಯಕ್ತಪಡಿಸಿದ ಎಂಎಲ್ಸಿ ವಿಶ್ವನಾಥ್, ಎಲ್ಲಾ ರಾಜಕೀಯ ಸಭೆ, ಸಮಾರಂಭ, ಮೆರವಣಿಗೆಗಳನ್ನು ಸ್ಥಗಿತಗೊಳಿಸಿ. ಕೊವಿಡ್ ಹರಡಲು ಇದೇ ಪ್ರಮುಖವಾದ ಕಾರಣವಾಗಿದೆ. ರಾಜಕೀಯ ಪಕ್ಷಗಳು ಜನ ಗುಂಪಾಗಿ ಸೇರುವ ಕಾರ್ಯಕ್ರಮಗಳನ್ನ ನಿಲ್ಲಿಸಿ. ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ. ವೀಕೆಂಡ್ ಕರ್ಫ್ಯೂನಿಂದ ಕೊರೊನಾ ನಿಯಂತ್ರಣಕ್ಕೆ ಬರಲ್ಲ. ಶಾಲಾ ಕಾಲೇಜುಗಳು ಆರಂಭವಾಗುವುದರಿಂದ ಕೊವಿಡ್ ಹರಡಲ್ಲ. ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಂದಲೇ ಸಮಸ್ಯೆ ಹೆಚ್ಚು. ಗಡಿ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಅಂತ ಸಲಹೆ ನೀಡಿದ್ದಾರೆ.
ಹಣ ಪಡೆದು ಕೇರಳದವರನ್ನು ರಾಜ್ಯದೊಳಗೆ ಬಿಡುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕೇರಳ ಗಡಿ ಬಂದ್ ಮಾಡಬೇಕು. ಗಡಿ ಬಂದ್ ಮಾಡದಿದ್ದರೆ ಕೊರೊನಾ ನಿಯಂತ್ರಣ ಆಗಲ್ಲ. ದಸರಾ ಇನ್ನೇನು ಅಕ್ಟೋಬರ್ಗೆ ಶುರವಾಗಲಿದೆ. ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಬೇಕು. ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಮಾಡಬೇಕು ಅಂತ ವಿಶ್ವನಾಥ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ನಾಳೆಯಿಂದ ಶಾಲಾ- ಕಾಲೇಜು ಆರಂಭದ ಬಗ್ಗೆ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಮಾತ್ರ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ. ಗ್ರಾಮೀಣ ಭಾಗದತ್ತ ಆರೋಗ್ಯ ಇಲಾಖೆ ಗಮನ ಹರಿಸಬೇಕು. ಮಕ್ಕಳ ಮೇಲೆ ಕೊರೊನಾ 3ನೇ ಅಲೆಯ ತೂಗುಗತ್ತಿ ಇದೆ. ಇದನ್ನು ಯಾರೂ ಕೂಡ ಲಘುವಾಗಿ ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಕಲ್ಯಾಣ್ ಸಿಂಗ್ ಅಂತಿಮ ದರ್ಶನ ಪಡೆಯಲು ಲಖನೌಗೆ ಬಂದ ಪ್ರಧಾನಿ ಮೋದಿ; ನಾಳೆ ಗಂಗಾನದಿ ತಟದಲ್ಲಿ ಅಂತ್ಯಕ್ರಿಯೆ
(H Vishwanath said Bangalore to Mysore six path road is not Pratap Simhas achievement)